ಸ್ನೇಹಿತರೊಂದಿಗೆ ಶಾಲೆಯಲ್ಲಿ ಎಂದಿನಂತೆ ಬಿಸಿಯೂಟ ಸೇವಿಸುತ್ತಿದ್ದ ವೇಳೆ 14 ವರ್ಷದ ಬಾಲಕನೊಬ್ಬ ಏಕಾಏಕಿ ಕುಸಿದು ಬಿದ್ದು, ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಂಡ್ಯದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೀರಮಣಿ ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಶಾಲೆಯಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸೇವಿಸುತ್ತಿದ್ದ ವೇಳೆ ವೀರಮಣಿ ಏಕಾಏಕಿ ಕುಸಿದುಬಿದ್ದಿದ್ದಾನೆ.
ಕೂಡಲೇ ಶಾಲೆಯ ಶಿಕ್ಷಕರು ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಬಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ವೈದ್ಯರು ಬಾಲಕನಿಗೆ ಅಗತ್ಯ ಚಿಕಿತ್ಸೆ ನೀಡಿದರೂ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ವೀರಮಣಿ ಕೊನೆಯುಸಿರೆಳೆದಿದ್ದಾನೆ. ತಪಾಸಣೆ ನಡೆಸಿದ ವೈದ್ಯರು ತೀವ್ರ ಹೃದಯಾಘಾತದಿಂದ ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಯಾವುದೇ ಅನಾರೋಗ್ಯದ ಲಕ್ಷಣಗಳಿಲ್ಲದೆ ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಸಾಮಾನ್ಯವಾಗಿ ಬಿಸಿಯೂಟ ಮಾಡುತ್ತಿದ್ದ ಬಾಲಕ ಏಕಾಏಕಿ ಮೃತಪಟ್ಟಿರುವುದು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಕುಟುಂಬಸ್ಥರಲ್ಲಿ ತೀವ್ರ ಆಘಾತ ಮೂಡಿಸಿದೆ. ಬದುಕಿ ಬಾಳಬೇಕಿದ್ದ ಬಾಲಕನ ಹಠಾತ್ ನಿಧನ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದ್ದು, ಮನೆಯವರ ಆಕ್ರಂದನ ಮುಗಿಲುಮುಟ್ಟಿದೆ.

