ಶ್ರೀ ನಾರಾಯಣ ಗುರು ಜಯಂತಿಯ ಅಂಗವಾಗಿ ಕಾಪು ಶ್ರೀ ನಾರಾಯಣ ಗುರು ಕೋಚಿಂಗ್ ಸೆಂಟರ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರೇರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ತರಬೇತುದಾರ ರಾಜೇಂದ್ರ ಭಟ್ ಕಾರ್ಕಳ ಮಾತನಾಡಿ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಯಶಸ್ಸನ್ನು ಸಾಧಿಸಲು ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳುವುದರ ಜೊತೆಗೆ, ನಿಗದಿಪಡಿಸಿಕೊಂಡ ಗುರಿಯನ್ನು ತಲುಪುವವರೆಗೆ ನಿರಂತರ ಪ್ರಯತ್ನ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಪರೀಕ್ಷಾ ಸಿದ್ಧತೆಯ ಕುರಿತು ಮಾರ್ಗದರ್ಶನ ನೀಡಿದ ಅವರು, ಪರೀಕ್ಷೆಗಳಿಗೆ ಯಾವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು, ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು, ಓದಿನ ಮೇಲೆ ಏಕಾಗ್ರತೆ ಬೆಳೆಸಿಕೊಳ್ಳುವುದು ಹಾಗೂ ಪರೀಕ್ಷಾ ಸಂದರ್ಭದಲ್ಲಿನ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ಬಗ್ಗೆ ಹಲವು ಉಪಯುಕ್ತ ಸಲಹೆಗಳನ್ನು ನೀಡಿದರು.
ವಿದ್ಯಾರ್ಥಿಗಳು ಆತ್ಮವಿಶ್ವಾಸ ಕಳೆದುಕೊಳ್ಳದೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟುಕೊಂಡು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ನಿರಂತರ ಪರಿಶ್ರಮ, ಶಿಸ್ತು ಮತ್ತು ಸಕಾರಾತ್ಮಕ ಮನೋಭಾವ ಯಶಸ್ಸಿನ ಪ್ರಮುಖ ಅಂಶಗಳಾಗಿವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಉಮಾನಾಥ್ ಕಾಪು, ಶ್ರೀ ನಾರಾಯಣ ಗುರು ಕೋಚಿಂಗ್ ಸೆಂಟರ್‌ನ ಸ್ಥಾಪಕಿ ಸೌಂದರ್ಯ ಯು.ಕೆ., ಮ್ಯಾನೇಜಿಂಗ್ ಡೈರೆಕ್ಟರ್ ಲೋಕೇಶ್ ಬೆಳ್ಳಡ ಹಾಗೂ ಶಿಕ್ಷಕಿ ತ್ರಿಷಾ ಉಪಸ್ಥಿತರಿದ್ದರು.
ಶಿಕ್ಷಕಿ ಸರಸ್ವತಿ ದೇವಾಡಿಗ ವಂದಿಸಿದರು. ನಿರ್ದೇಶಕ ಸಾಕ್ಷಾತ್ ಯು.ಕೆ. ಕಾರ್ಯಕ್ರಮ ನಿರೂಪಿಸಿದರು.

