ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿದರೆ ತಾವು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಪುತ್ತೂರಿನ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮನ್ನು ಕಾಂಗ್ರೆಸ್ ಕಾರ್ಯಕರ್ತನಲ್ಲ ಎಂದು ಆರೋಪಿಸಿ ಅಶೋಕ್ ರೈ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಮುಖಂಡ ಜಲೀಲ್ ಕರೋಪಾಡಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದವರನ್ನು ಅಶೋಕ್ ರೈ ಜೊತೆಯಲ್ಲಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಹಕೀಂ, ಶಾಸಕ ಹಾಗೂ ಅವರ ಬೆಂಬಲಿಗರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವಿಚಾರವಾಗಿ ಅಗತ್ಯವಿದ್ದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿದರು.
ಸೆಪ್ಟೆಂಬರ್ 1ರಂದು ಪುತ್ತೂರು ಪತ್ರಿಕಾ ಭವನದಲ್ಲಿ ತಾವು ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಅಶೋಕ್ ರೈ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪತ್ರಕರ್ತರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಸುದ್ದಿಗೋಷ್ಠಿ ಮುಗಿದ ಬಳಿಕವೂ ಶಾಸಕ ಅಶೋಕ್ ರೈ ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ತಮ್ಮೊಂದಿಗೆ ಸಂಘರ್ಷಕ್ಕೆ ಮುಂದಾದರು ಎಂದು ಹಕೀಂ ಆರೋಪಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಜನರ ಪ್ರಶ್ನೆಗಳಿಗೆ ಉತ್ತರಿಸುವುದು ಜನಪ್ರತಿನಿಧಿಯ ಜವಾಬ್ದಾರಿಯಾಗಿದೆ. ಪ್ರಶ್ನಿಸುವವರನ್ನು ಬೆದರಿಸುವುದು ಪ್ರಜಾಪ್ರಭುತ್ವದ ಮಾರ್ಗವಲ್ಲ. ಯಾವುದೇ ರೀತಿಯ ಬೆದರಿಕೆಯ ಮೂಲಕ ತಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಹಕೀಂ ಕೂರ್ನಡ್ಕ ಹೇಳಿದರು.ಅಶೋಕ್ ರೈ ಅವರು ಕಾಂಗ್ರೆಸ್ ಪಕ್ಷದ ಶಾಸಕರಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ತತ್ವಗಳು, ಕಾರ್ಯಕರ್ತರ ಹಿತಾಸಕ್ತಿ ಹಾಗೂ ಕ್ಷೇತ್ರದ ಜನರ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
ವಿಟ್ಲ ಸೇರಿದಂತೆ ವಿವಿಧ ಘಟನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು ಕೇಳಿಬರುತ್ತಿವೆ. ಬಡವರ ಮೇಲೆ ಗನ್ ತೋರಿಸಿ ಬೆದರಿಕೆ ಹಾಕಲಾಗಿದೆ ಎಂಬ ಆರೋಪಗಳು, ವಿಟ್ಲದ ಕೋಳಿ ಅಂಕದ ಸ್ಥಳಕ್ಕೆ ಪೊಲೀಸರು ತೆರಳಿದ ಘಟನೆ ಹಾಗೂ ಬಳಿಕದ ಘಟನೆ. ಈ ಘಟನೆಗಳಿಗೆ ಸಂಬಂಧಿಸಿದ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಸ್ಪಷ್ಟವಾಗಬೇಕು. ಸಾರ್ವಜನಿಕವಾಗಿ ಕೇಳಿಬರುತ್ತಿರುವ ಪ್ರಶ್ನೆಗಳಿಗೆ ಶಾಸಕ ಅಶೋಕ್ ರೈ ಅವರು ಸ್ಪಷ್ಟ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪುತ್ತೂರು ಭಾಗದಲ್ಲಿ ಹಲವು ವರ್ಷಗಳಿಂದ ಪಕ್ಷದ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಬಂದಿರುವ ಹಿರಿಯ ಕಾಂಗ್ರೆಸ್ಸಿಗರು ಇಂದು ಎಲ್ಲಿದ್ದಾರೆ? ಅವರು ಏಕೆ ಮೌನವಾಗಿದ್ದಾರೆ ಎಂಬುದನ್ನು ಪಕ್ಷದ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಅಭಿಮಾನಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹಕೀಂ ಕೂರ್ನಡ್ಕ ಹೇಳಿದರು.
.

