ಸೆ.5ರಂದು ಮಂಗಳೂರಿನಲ್ಲಿ ಮೊಸರುಕುಡಿಕೆ ಸಂಭ್ರಮ : ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಸಾಧ್ಯತೆ

0
14

ಮಂಗಳೂರು : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆಪ್ಟೆಂಬರ್ 5ರಂದು ಮಂಗಳೂರು ನಗರದ ವಿವಿಧೆಡೆ ಮೊಸರುಕುಡಿಕೆ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇರುವುದರಿಂದ ಮಂಗಳೂರು ನಗರ ಪೊಲೀಸರು ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರ ಸಲಹೆಗಳನ್ನು ಪ್ರಕಟಿಸಿದ್ದಾರೆ.

ಮೊಸರುಕುಡಿಕೆ ಕಾರ್ಯಕ್ರಮ ಹಾಗೂ ಮೆರವಣಿಗೆ ಸಾಗುವ ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡದಂತೆ ಪೊಲೀಸರು ಸೂಚಿಸಿದ್ದಾರೆ. ಅಲ್ಲದೆ, ಅಗತ್ಯವಿದ್ದಲ್ಲಿ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ.

ತೊಕ್ಕೊಟ್ಟು ಒಳಪೇಟೆ

ತೊಕ್ಕೊಟ್ಟು ಜಂಕ್ಷನ್‌ನಿಂದ ಕೊಲ್ಯ ಜಂಕ್ಷನ್‌ವರೆಗೆ ಹಾಗೂ ಉಳ್ಳಾಲ ಅಬ್ಬಕ್ಕ ವೃತ್ತ–ಒಳಪೇಟೆ ಭಾಗದಲ್ಲಿ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.

ಪರ್ಯಾಯ ಮಾರ್ಗ : ತೊಕ್ಕೊಟ್ಟು ಜಂಕ್ಷನ್‌ನಿಂದ ತಲಪಾಡಿ ಕಡೆಗೆ ತೆರಳುವವರು ಸರ್ವಿಸ್ ರಸ್ತೆ ಮೂಲಕ ದೇರಳಕಟ್ಟೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಮಡ್ಯಾರ್–ಮಾಡೂರು–ಬೀರಿಕೋಟೆಕಾರ್ ಮಾರ್ಗ ಬಳಸಬಹುದು. ಉಳ್ಳಾಲ ಅಬ್ಬಕ್ಕ ವೃತ್ತ ಹಾಗೂ ತೊಕ್ಕೊಟ್ಟು ಒಳಪೇಟೆ ಕಡೆಗೆ ತೆರಳುವವರು ಬೀರಿಕೋಟೆಕಾರ್–ಸೋಮೇಶ್ವರ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.

ಕದ್ರಿ ಕಂಬಳ

ಬಟ್ಟಗುಡ್ಡೆ ಜಂಕ್ಷನ್‌ನಿಂದ ಕದ್ರಿ ಕಂಬಳ–ಭಾರತ್ ಬೀಡಿ ವರೆಗೆ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.

ಪರ್ಯಾಯ ಮಾರ್ಗ: ಬಟ್ಟಗುಡ್ಡೆಯಿಂದ ಕದ್ರಿ ಕಂಬಳ ಕಡೆಗೆ ತೆರಳುವವರು ಬಿಜೈ ಜಂಕ್ಷನ್–ಪಿಂಟೋ ಬೇಕರಿ–ಕರಂಗಲಪಾಡಿ ಮಾರ್ಗ ಬಳಸಬಹುದು. ಭಾರತ್ ಬೀಡಿ ಕಡೆಯಿಂದ ಬಟ್ಟಗುಡ್ಡೆ ಕಡೆಗೆ ತೆರಳುವವರು ಮಲ್ಲಿಕಟ್ಟೆ–ನಂತೂರು ಮಾರ್ಗ ಬಳಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

ಅತ್ತಾವರ

ಕೋಟಿಚೆನ್ನಯ ವೃತ್ತದಿಂದ ಬಾಬುಗುಡ್ಡೆ–ಅತ್ತಾವರ ಕೆಎಂಸಿ ರಸ್ತೆ–ಆನಂದ ಶೆಟ್ಟಿ ವೃತ್ತದವರೆಗೆ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.

ಪರ್ಯಾಯ ಮಾರ್ಗ: ಕೋಟಿಚೆನ್ನಯ ವೃತ್ತದಿಂದ ಅತ್ತಾವರ ಕಡೆಗೆ ತೆರಳುವವರು ವೆಲೆನ್ಸಿಯಾ ಮಾರ್ಗ ಬಳಸಬಹುದು. ಅತ್ತಾವರದಿಂದ ಕೋಟಿಚೆನ್ನಯ ವೃತ್ತದ ಕಡೆಗೆ ತೆರಳುವವರು ಆನಂದ ಶೆಟ್ಟಿ ವೃತ್ತದಲ್ಲಿ ಎಡಕ್ಕೆ ತಿರುಗಿ ಎಸ್.ಎಲ್. ಮಥಾಯಸ್ ರಸ್ತೆ–ಹೈಲ್ಯಾಂಡ್ ಜಂಕ್ಷನ್ ಮೂಲಕ ಸಂಚರಿಸಬಹುದು.

ಕೊಟ್ಟಾರ

ಕೊಟ್ಟಾರ ಚೌಕಿಯಿಂದ ಉರ್ವಸ್ಟೋರ್ ಜಂಕ್ಷನ್‌ವರೆಗೆ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.

ಪರ್ಯಾಯ ಮಾರ್ಗ: ಲಾಲ್‌ಬಾಗ್/ನಾರಾಯಣಗುರು ವೃತ್ತದಿಂದ ಕೊಟ್ಟಾರ ಚೌಕಿ ಕಡೆಗೆ ತೆರಳುವವರು ಕೆಎಸ್‌ಆರ್‌ಟಿಸಿ–ಕುಂಟಿಕಾನ ಮಾರ್ಗ ಬಳಸಬಹುದು. ಕೊಟ್ಟಾರದಿಂದ ಲಾಲ್‌ಬಾಗ್ ಕಡೆಗೆ ತೆರಳುವ ಲಘು ವಾಹನಗಳು ಕುಂಟಿಕಾನ–ಬಿಜೈ–ಕೆಎಸ್‌ಆರ್‌ಟಿಸಿ ಮಾರ್ಗ ಬಳಸಬಹುದು.

ಘನ ವಾಹನಗಳು ಕುಂಟಿಕಾನ–ಕೆಪಿಟಿ ವೃತ್ತ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.

ವಾಹನ ಸವಾರರಿಗೆ ಪೊಲೀಸರ ಮನವಿ

ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ನಡೆಯುವ ಮೊಸರುಕುಡಿಕೆ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡುವಂತೆ ಮಂಗಳೂರು ನಗರ ಪೊಲೀಸರು ಮನವಿ ಮಾಡಿದ್ದಾರೆ.

ಮೆರವಣಿಗೆ ಸಾಗುವ ರಸ್ತೆಗಳು ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಗಳ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸದಂತೆ ಸೂಚಿಸಲಾಗಿದೆ. ಸಾಧ್ಯವಾದಷ್ಟು ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವುದರ ಮೂಲಕ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಮೆರವಣಿಗೆಯ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ನೀಡುವ ಸಂಚಾರ ಸೂಚನೆಗಳನ್ನು ಪಾಲಿಸುವಂತೆ ಹಾಗೂ ಅನಗತ್ಯವಾಗಿ ವಾಹನ ಸಂಚಾರ ನಡೆಸದೆ ಸಹಕರಿಸುವಂತೆ ವಾಹನ ಸವಾರರಲ್ಲಿ ಮನವಿ ಮಾಡಲಾಗಿದೆ.