ತುಳುವರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ : ಚಿತ್ತರಂಜನ್ ಶೆಟ್ಟಿ ಬೊಂಡಾಲ

0
9

ಮಂಗಳೂರು : ಕಳೆದ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವು ತುಳುವರಿಗೆ ನೀಡಿರುವ ತುಳು ಭಾಷೆಗೆ ಎರಡನೇ ಭಾಷೆಯ ಸ್ಥಾನಮಾನ ಹಾಗೂ ತುಳು ಅಭಿವೃದ್ಧಿ ಪ್ರಾಧಿಕಾರ ರಚಿಸುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಕಾಂಗ್ರೆಸ್‌ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ ಆಶ್ವಾಸನೆ ನೀಡಿದರು.

ತುಳುವ ಮಹಾಸಭೆ ಒತ್ತಾಯಿಸುತ್ತಿರುವಂತೆ, ಚುನಾವಣಾ ಸಂದರ್ಭದಲ್ಲಿ ತುಳುವರಿಗೆ ನೀಡಿದ ಪ್ರಮುಖ ಆಶ್ವಾಸನೆಗಳನ್ನು ಈಡೇರಿಸಲು ಸರ್ಕಾರದ ಗಮನಕ್ಕೆ ತಂದು, ಅವು ಕಾರ್ಯರೂಪಕ್ಕೆ ಬರುವಂತೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಅವರು ಹೇಳಿದರು.

ತುಳುವೇಶ್ವರ ಮತ್ತು ತುಳುವೇಶ್ವರಿ ಹೆಸರಿನ ದೇವರುಗಳೇ ಇರುವಾಗ, ತುಳು ಭಾಷೆಯ ಶಾಸ್ತ್ರೀಯ ಸ್ಥಾನಮಾನ ಹಾಗೂ ಅದರ ಪ್ರಾಚೀನ ನಾಗರಿಕತೆಯ ಬಗ್ಗೆ ಎರಡು ಮಾತಿಲ್ಲ. ತುಳು ಭಾಷೆಯ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಗೆ ಸೂಕ್ತ ಗೌರವ ಹಾಗೂ ಮಾನ್ಯತೆ ದೊರೆಯಬೇಕು ಎಂದು ಅವರು ಒತ್ತಿ ಹೇಳಿದರು.

ಶತಮಾನದ ಇತಿಹಾಸ ಹೊಂದಿರುವ ತುಳುವ ಮಹಾಸಭೆಯ ಶತಮಾನೋತ್ಸವದ ಸಂದರ್ಭದಲ್ಲಿ ತುಳುವರ ಈ ಪ್ರಮುಖ ಬೇಡಿಕೆಗಳು9 ಈಡೇರಬೇಕಾದದ್ದು ಸರ್ಕಾರದ ಧರ್ಮವಾಗಿದೆ. ಪ್ರತಿಯೊಬ್ಬರೂ ಪಕ್ಷಭೇದ ಮರೆತು ಈ ಮಹತ್ಕಾರ್ಯಕ್ಕೆ ಸರ್ಕಾರವನ್ನು ಒತ್ತಾಯಿಸಬೇಕು. ತುಳು ಭಾಷೆ ಮತ್ತು ತುಳುವರ ಸಾಂಸ್ಕೃತಿಕ ಅಸ್ಮಿತೆಯ ರಕ್ಷಣೆಗೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಚಿತ್ತರಂಜನ್ ಶೆಟ್ಟಿ ಬೊಂಡಾಲ ಒತ್ತಿ ಹೇಳಿದರು.