ಕೆಮ್ಮಣ್ಣಿನಲ್ಲಿ 38ನೇ ವರ್ಷದ ಮೊಸರು ಕುಡಿಕೆ ಸಂಭ್ರಮ

0
28

ನಿಟ್ಟೆ : ರೋಟರಿ ಸಮುದಾಯ ದಳ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.), ಕೆಮ್ಮಣ್ಣು, ನಿಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 38ನೇ ವರ್ಷದ ಮೊಸರು ಕುಡಿಕೆ ಸಾರ್ವಜನಿಕ ಕಾರ್ಯಕ್ರಮ ಕೆಮ್ಮಣ್ಣಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ವಿವಿಧ ವಯೋಮಾನದವರಿಗೆ ನಾನಾ ರೀತಿಯ ಆಕರ್ಷಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳಿಗಾಗಿ ನಡೆದ ಮುದ್ದು ಕೃಷ್ಣ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿದ್ದು, ಪುಟಾಣಿ ಕೃಷ್ಣರ ವೇಷಭೂಷಣಗಳು ನೆರೆದಿದ್ದವರ ಮನಸೂರೆಗೊಂಡವು.‌

ಮುಖ್ಯ ಅಭ್ಯಾಗತರಾಗಿ ಮಾತೃ ಸಂಸ್ಥೆ ರೋಟರಿ ಕ್ಲಬ್ ನಿಟ್ಟೆಯ ಅಧ್ಯಕ್ಷೆ ರೊ. ಶೈಲಜಾ ವಿ. ಶೆಟ್ಟಿ ಹಾಗೂ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹರೀಶ್ ಆಚಾರ್ಯ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು. ರೋಟರಿ ಸಮುದಾಯ ದಳದ ಸಭಾಪತಿ ಗೋಪಾಲಕೃಷ್ಣ ಎಸ್., ಹಿರಿಯ ರೋಟರಿ ಬಂಧು ಕೆ. ಅನಿಲ್ ಕುಮಾರ್ ಹಾಗೂ ನಿಟ್ಟೆ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಹೊಳ್ಳ ಸೇರಿದಂತೆ ರೋಟರಿ ಸಂಸ್ಥೆಯ ಹಿರಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೋಟರಿ ಸಮುದಾಯ ದಳದ ಅಧ್ಯಕ್ಷ ಸುರೇಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಹಾಗೂ ಸ್ಥಳೀಯ ಪಂಚಾಯತ್ ಪ್ರತಿನಿಧಿ ಸಂತೋಷ್ ಶೆಟ್ಟಿ ಸ್ವಾಗತಿಸಿದರು. RCCಯ ಪೂರ್ವ ಜಿಲ್ಲಾ ಪ್ರತಿನಿಧಿ ಶ್ರೀ ವೆಂಕಟಕೃಷ್ಣ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ

ಕಾರ್ಯಕ್ರಮದಲ್ಲಿ SSLC ಹಾಗೂ PUCಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸ್ಥಳೀಯ ವಿದ್ಯಾರ್ಥಿಗಳಾದ ಜೀವನ್ ಕೆ.ಜೆ., ಶರಣ್ಯ ಪೂಜಾರಿ, ಸೌಮ್ಯ ಆಚಾರ್ಯ ಹಾಗೂ ವೈಭವ್ ಮೂಲ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಸ್ಥಳೀಯ ಕ್ರೀಡಾ ಸಾಧಕರಾದ ಸ್ವಸ್ತಿಶ್ರೀ, ನಿಧೀಕ್ಷಾ, ಸುಜೀಕ್ಷಾ ಹೆಬ್ಬಾರ್ ಹಾಗೂ ಸುವಿನ್ ದೇವಾಡಿಗ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರನ್ನು ಸನ್ಮಾನಿಸಲಾಯಿತು. ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹರೀಶ್ ಆಚಾರ್ಯ, ಇತ್ತೀಚೆಗೆ ಪಿಎಚ್‌ಡಿ ಪದವಿ ಪಡೆದ ಡಾ. ಅಂಕಿತಾ ಕೆ. ರಾವ್, ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಗಂಗಾಧರ ಆಚಾರ್ಯ, ಶಿಕ್ಷಕ ವೃತ್ತಿಯ ಜೊತೆಗೆ ರಾಷ್ಟ್ರಪ್ರೇಮ ಸೃಜನಶೀಲ ರತ್ನ ಪ್ರಶಸ್ತಿ ಪುರಸ್ಕೃತ ಕಲಾವಿದ ಸುರೇಶ್, ಕೆಮ್ಮಣ್ಣು ನಿಟ್ಟೆ ಹಾಗೂ ಜಪಾನ್‌ನ ಸಕುರ ವಿಜ್ಞಾನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಬಾಲ ಪ್ರತಿಭೆ ಕುಮಾರಿ ಮಾನ್ಯ ಶಂಕರ್, ಕೆಮ್ಮಣ್ಣು ಅವರನ್ನು ಸನ್ಮಾನಿಸಲಾಯಿತು.

ವಿವಿಧ ಕ್ಷೇತ್ರಗಳಿಂದ ಪ್ರಾಯೋಜಕರ ಸಹಕಾರ

ಮುದ್ದು ಕೃಷ್ಣ ಸ್ಪರ್ಧೆಗೆ ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿಕಟಪೂರ್ವ ಉಪಪ್ರಾಂಶುಪಾಲ ಡಾ. ಶ್ರೀನಿವಾಸ್ ರಾವ್ ಬಿ.ಆರ್. ಹಾಗೂ ನಿಟ್ಟೆ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಹೊಳ್ಳ ಸಹಕರಿಸಿದರು. ಮುಂಬೈ ಉದ್ಯಮಿ ದಿವಾಕರ ಶೆಟ್ಟಿ, ನರಂಗಬೆಟ್ಟು, ನಿಟ್ಟೆ ಉಪಹಾರ ವ್ಯವಸ್ಥೆ, ಜ್ಯೋತಿಷಿ ವೇದಮೂರ್ತಿ ಪ್ರಸನ್ನ ಆಚಾರ್ಯ ಸಿಹಿತಿಂಡಿ ವ್ಯವಸ್ಥೆ ಹಾಗೂ ರಾಘವೇಂದ್ರ ಭಟ್ ಅವರ ಸ್ಮರಣಾರ್ಥ ಪುತ್ರ ಅಕ್ಷಯ್ ಭಟ್, ಕೆಮ್ಮಣ್ಣು ಪಾನಕ ವ್ಯವಸ್ಥೆ ಮಾಡಿದರು. ಕೆಮ್ಮಣ್ಣು ಕೊಪ್ಪಳ ಮನೆ ಕೀರ್ತಿಶೇಷ ರಾಮ್ ಭಟ್ ಅವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.

ಕಾರ್ಯಕ್ರಮದ ಸಂದರ್ಭದಲ್ಲಿ ಸನ್ಮಾನ ಪತ್ರವನ್ನು ಉಮೇಶ್ ಕೋಟ್ಯಾನ್, ಪ್ರಶಾಂತ್ ಕೋಟ್ಯಾನ್, ಶಂಕರ್ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ ವಿ. ಆಚಾರ್ಯ ಹಾಗೂ ಕ್ಲಬ್‌ನ ಉಪಾಧ್ಯಕ್ಷ ಕೃಷ್ಣಾನಂದ ರಾವ್ ವಾಚಿಸಿದರು.

ವಿಠಲ್ ಆಚಾರ್ಯ, ಪ್ರಕಾಶ್ ಸಾಲ್ಯಾನ್ ಹಾಗೂ ರಾಜೇಶ್ ಮೂಲ್ಯ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ರೋಟರಿ ಸಮುದಾಯ ದಳದ ಕಾರ್ಯದರ್ಶಿ ಪ್ರದೀಪ್ ಸುವರ್ಣ ವಂದಿಸಿದರು. ಪೂರ್ವಾಧ್ಯಕ್ಷ ಸತೀಶ್ ಶೆಟ್ಟಿ ಅಗ್ಗ್ಯೊಟ್ಟು ಕಾರ್ಯಕ್ರಮ ನಿರೂಪಿಸಿದರು.

ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರದೊಂದಿಗೆ ನಡೆದ ಮೊಸರು ಕುಡಿಕೆ ಕಾರ್ಯಕ್ರಮವು ಸ್ಥಳೀಯರ ಹಾಗೂ ಸಾರ್ವಜನಿಕರ ಉತ್ತಮ ಸಹಕಾರದಿಂದ ಯಶಸ್ವಿಯಾಗಿ ನೆರವೇರಿತು.