ಯುವವಾಹಿನಿ ಮೂಡುಬಿದಿರೆ ಘಟಕದಿಂದ ಅಶಕ್ತ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ

0
26

ಮೂಡುಬಿದಿರೆ : ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ದಾನಿಗಳ ಸಹಕಾರದೊಂದಿಗೆ ಮೂಡುಮಾರ್ನಾಡ್‌ನಲ್ಲಿ ಸುಮಿತ್ರ ವಿಶ್ವನಾಥ್‌ ಪೂಜಾರಿ ಇವರಿಗೆ ಸುಮಾರು ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮನೆಯನ್ನು ಸೆ. 6ರಂದು ಹಸ್ತಾಂತರಿಸಲಾಯಿತು.

ಮನೆ ಹಸ್ತಾಂತರ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಹೈಕೋರ್ಟ್ ಹೆಚ್ಚುವರಿ ಅಡ್ವೊಕೇಟ್ ಜನರಲ್ ಇರುವೈಲು ತಾರಾನಾಥ್ ಪೂಜಾರಿ, “ಮಾನವ ಸೇವೆಯೇ ನಿಜವಾದ ದೇಶ ಸೇವೆ” ಎಂದು ಹೇಳಿದರು. ಅಶಕ್ತ ಕುಟುಂಬಗಳ ಕಷ್ಟಗಳಿಗೆ ಸ್ಪಂದಿಸಿ, ಅವರಿಗೆ ಭದ್ರತೆ ಹಾಗೂ ಸ್ವಾಭಿಮಾನದ ಬದುಕು ಕಲ್ಪಿಸುವ ಯುವವಾಹಿನಿಯ ಸೇವಾ ಕಾರ್ಯ ಶ್ಲಾಘನೀಯವಾಗಿದೆ ಎಂದರು.


ಮಾನವ ಜನ್ಮದ ಸಾರ್ಥಕತೆಗೆ ಸಮಾಜಮುಖಿ ಕಾರ್ಯಗಳು ಅಗತ್ಯ: ಡಾ. ಮೋಹನ್ ಆಳ್ವ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ನೂತನ ಮನೆಯ ಕೀ ಹಸ್ತಾಂತರಿಸಿ ಮಾತನಾಡಿ, ಅಶಕ್ತ ಕುಟುಂಬಕ್ಕೆ ಶಾಶ್ವತ ನೆಲೆ ಕಲ್ಪಿಸುವ ಮೂಲಕ ಯುವವಾಹಿನಿ ಅರ್ಥಪೂರ್ಣ ಸಮಾಜಮುಖಿ ಕಾರ್ಯ ನಡೆಸಿದೆ. ಇಂತಹ ಸೇವಾ ಕಾರ್ಯಗಳು ಮಾನವ ಜನ್ಮದ ಸಾರ್ಥಕತೆಗೆ ಮಾದರಿಯಾಗಿದ್ದು, ಯುವಜನತೆಗೆ ಪ್ರೇರಣೆಯಾಗಿವೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು ವಹಿಸಿದ್ದರು. ಮನೆ ನಿರ್ಮಾಣದ ನೇತೃತ್ವ ವಹಿಸಿದ್ದ ಘಟಕದ ಮಾಜಿ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಡು, ಶ್ರೀಕ್ಷೇತ್ರ ಹೋಯ್ಪಾಲಬೆಟ್ಟದ ಅನುವಂಶಿಕ ಆಡಳಿತ ಮೊಕ್ತೇಸರ ರಾಜೇಶ್ ಬಲ್ಲಾಳ್, ಮೂಡುಮಾರ್ನಾಡ್ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ, ಮೂಡುಬಿದಿರೆ ಭೂನ್ಯಾಯ ಮಂಡಳಿ ಸದಸ್ಯ ರಮೇಶ್ ಶೆಟ್ಟಿ, ಪಾಪಣ್ಣ ಪೂಜಾರಿ ಗುಮಡಬೆಟ್ಟು, ಮೂಡುಬಿದಿರೆ ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯುವವಾಹಿನಿ ಮೂಡುಬಿದಿರೆ ಘಟಕದ ಸಮಾಜ ಸೇವಾ ನಿರ್ದೇಶಕ ಉಮೇಶ್ ಕೋಟ್ಯಾನ್, ಕಾರ್ಯದರ್ಶಿ ಮೇಘನಾ, ಕೋಶಾಧಿಕಾರಿ ಜಯಶೀಲಾ ಪೂಜಾರಿ ಹಾಗೂ ಸುಮಿತ್ರಾ ವಿಶ್ವನಾಥ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕು. ಸುನೀಕ್ಷಾ ಹಾಗೂ ಕು. ಗಾನವಿ ಪ್ರಾರ್ಥಿಸಿದರು. ಘಟಕದ ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ. ಪ್ರಸ್ತಾವನೆ ಹಾಗೂ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಪರಿಚಯಿಸಿ ಗೌರವಿಸಿದರು. ರಾಮ್ ಕುಮಾರ್ ಮೂಡುಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.