ಕಾನೂನು ಎಲ್ಲರಿಗೂ ಒಂದೇ : ಪೊಲೀಸ್ ಅಧಿಕಾರಿಯ ಕಾರಿಗೂ ಬಿತ್ತು ಲಾಕ್!

0
92

ಮೂಡುಬಿದಿರೆ: ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ, ನೋ ಎಂಟ್ರಿ ಉಲ್ಲಂಘನೆ, ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಹಾಗೂ ತ್ರಿಬಲ್ ರೈಡಿಂಗ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ಮೂಡುಬಿದಿರೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಇತ್ತೀಚೆಗೆ ಎಸಿಪಿ ಶ್ರೀಕಾಂತ್ ಅವರು ಮೂಡುಬಿದಿರೆಗೆ ಭೇಟಿ ನೀಡಿ ಪಟ್ಟಣದ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ವಿವಿಧ ಸಂಚಾರ ನಿಯಮಗಳ ಬಗ್ಗೆ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು. ಇದಾದ ಬಳಿಕ ಮೂಡುಬಿದಿರೆ ಪೊಲೀಸರು ಸಂಚಾರ ನಿಯಮಗಳ ಪಾಲನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಪಟ್ಟಣದಲ್ಲಿ ಕಂಡಕಂಡಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು, ನೋ ಎಂಟ್ರಿ ಪ್ರದೇಶಕ್ಕೆ ವಾಹನಗಳನ್ನು ಪ್ರವೇಶಿಸುವುದು, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು ಹಾಗೂ ತ್ರಿಬಲ್ ರೈಡಿಂಗ್ ಮಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ನಿಯಮ ಉಲ್ಲಂಘಿಸುವ ವಾಹನಗಳನ್ನು ನಿಲ್ಲಿಸಿ ದಂಡ ವಿಧಿಸುವುದರ ಜೊತೆಗೆ, ಅಕ್ರಮವಾಗಿ ನಿಲುಗಡೆ ಮಾಡಿರುವ ವಾಹನಗಳಿಗೆ ಲಾಕ್ ಹಾಕಿ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ನಡುವೆ ಪಟ್ಟಣದಲ್ಲಿ ಅಕ್ರಮವಾಗಿ ನಿಲುಗಡೆ ಮಾಡಲಾಗಿದ್ದ ವಾಹನಗಳ ಪೈಕಿ ಪೊಲೀಸ್ ಅಧಿಕಾರಿಯೊಬ್ಬರ ಕಾರಿಗೂ ಲಾಕ್ ಹಾಕಿರುವ ಘಟನೆ ಗಮನ ಸೆಳೆದಿದೆ. ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕಾರನ್ನು ನಿಲುಗಡೆ ಮಾಡಿ ತೆರಳಿದ್ದರು. ವಾಹನ ಪೊಲೀಸ್ ಅಧಿಕಾರಿಯದ್ದೆಂಬುದು ತಿಳಿಯದ ಪೊಲೀಸರು, ನಿಯಮದಂತೆ ಕಾರಿಗೆ ಲಾಕ್ ಹಾಕಿ ತೆರಳಿದ್ದಾರೆ.

ಈ ಘಟನೆ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಂಚಾರ ನಿಯಮ ಪಾಲನೆಯಲ್ಲಿ ಪೊಲೀಸರು ಯಾವುದೇ ತಾರತಮ್ಯ ಮಾಡದೆ ಕ್ರಮ ಕೈಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

“ಕಾನೂನು ಎಲ್ಲರಿಗೂ ಒಂದೇ; ನಿಯಮ ಉಲ್ಲಂಘಿಸಿದರೆ ಯಾರೇ ಆಗಿದ್ದರೂ ಕ್ರಮ ಎದುರಿಸಬೇಕು” ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೂಡುಬಿದಿರೆ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಇಂತಹ ಕಟ್ಟುನಿಟ್ಟಿನ ಕ್ರಮಗಳು ಮುಂದುವರಿಯಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.