ಪುತ್ತೂರು : ಇದುವರೆಗೆ ಗ್ರಾಮೀಣ ಹಾಗೂ ಅರಣ್ಯ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕಾಡುಕೋಣಗಳು ಇದೀಗ ಪುತ್ತೂರು ಪೇಟೆಯತ್ತಲೂ ಲಗ್ಗೆ ಇಡತೊಡಗಿವೆ. ಪುತ್ತೂರು ಬೈಪಾಸ್ ರಸ್ತೆಯ ದುಗ್ಗಮ್ಮ–ದೇರಣ್ಣ ಹಾಲ್ ಸಮೀಪ ಸೆ.11ರ ನಸುಕಿನ ಜಾವ ರಸ್ತೆಯಲ್ಲೇ ಎರಡು ಕಾಡುಕೋಣಗಳು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ನಸುಕಿನ ವೇಳೆ ರಸ್ತೆಯಲ್ಲಿ ಎರಡು ಕಾಡುಕೋಣಗಳು ನಿಂತಿರುವುದು ಸಾರ್ವಜನಿಕರು ಹಾಗೂ ವಾಹನ ಸವಾರರ ಗಮನಕ್ಕೆ ಬಂದಿದೆ. ಕಾಡುಕೋಣಗಳನ್ನು ಕಂಡು ಕೆಲಕಾಲ ವಾಹನ ಸವಾರರು ಆತಂಕಗೊಂಡಿದ್ದು, ಪೇಟೆ ಪ್ರದೇಶದತ್ತ ಕಾಡುಕೋಣಗಳು ಆಗಮಿಸಿರುವುದು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.
ಅರಣ್ಯ ಪ್ರದೇಶದಲ್ಲಿ ಆಹಾರ ಹಾಗೂ ನೀರಿನ ಕೊರತೆಯಿಂದ ಕಾಡುಕೋಣಗಳು ಜನವಸತಿ ಪ್ರದೇಶಗಳತ್ತ ಬರುತ್ತಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪೇಟೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿಯೂ ಕಾಡುಕೋಣಗಳ ಸಂಚಾರ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಬಗ್ಗೆ ತಕ್ಷಣ ಗಮನಹರಿಸಿ, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

