ಸಂದೀಪ್ ಬಾರಾಡಿ ನಿರ್ದೇಶನದ ವಿಜಯ ರಾಘವೇಂದ್ರ ಅಭಿನಯದ “ಅಭೇದ್ಯಂ” ಚಿತ್ರದ ಪೋಸ್ಟರ್ ಬಿಡುಗಡೆ

0
22

ಉಜಿರೆ : ‘ಚಿನ್ನಾರಿ ಮುತ್ತ’ ಖ್ಯಾತಿಯ ವಿಜಯ ರಾಘವೇಂದ್ರ ಅಭಿನಯದ ಬಹು ನಿರೀಕ್ಷಿತ ‘ಅಭೇದ್ಯಂ’ ಚಿತ್ರ ಇದೀಗ ಮತ್ತಷ್ಟು ಕುತೂಹಲ ಮೂಡಿಸಿದೆ. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆದ ‘ಎಸ್.ಡಿ.ಎಂ ಆರೋಹಂ 2026’ ಕಾರ್ಯಕ್ರಮದ ವೇದಿಕೆಯಲ್ಲಿ ಚಿತ್ರದ ಅಧಿಕೃತ ಪೋಸ್ಟರ್ ಅದ್ದೂರಿಯಾಗಿ ಅನಾವರಣಗೊಂಡಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಅವರು ಪೋಸ್ಟರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಪೋಸ್ಟರ್‌ನಲ್ಲಿರುವ ಕಾಲ್ಗೆಜ್ಜೆ ಧರಿಸಿದ ರಕ್ತಸಿಕ್ತ ಕಾಲುಗಳು, ಕತ್ತಲೆಯ ಭಯಾನಕ ವಾತಾವರಣ ಹಾಗೂ ನಿಗೂಢತೆಯನ್ನು ಸಾರುವ ದೃಶ್ಯಗಳು ‘ಅಭೇದ್ಯಂ’ ಚಿತ್ರದ ಕಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ದೈವಿಕ ರಹಸ್ಯದ ಸುಳಿವು ನೀಡುವ ಪೋಸ್ಟರ್ ಈಗಾಗಲೇ ಚಿತ್ರಪ್ರೇಮಿಗಳ ಗಮನ ಸೆಳೆದಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

ದೈವಿಕ ರಹಸ್ಯದ ಬೆನ್ನತ್ತುವ ‘ಅಭೇದ್ಯಂ’

ಎಆರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅರುಣ್ ರೈ ತೋಡಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಂದೀಪ್ ಬಾರಾಡಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ರಾಜೇಶ್ ಕುಡ್ಲ ಕಾರ್ಯಕಾರಿ ನಿರ್ಮಾಪಕರಾಗಿ ತಂಡದಲ್ಲಿದ್ದಾರೆ.

ವಿಜಯ ರಾಘವೇಂದ್ರ ಅವರೊಂದಿಗೆ ಸಿಂಚನ ಪಿ. ರಾವ್, ಸುಂದರ್ ವೀಣಾ, ರೋಶನ್ ವೇಗಸ್, ಪ್ರವೀಣ್ ಜೈನ್, ಯುವ ಶೆಟ್ಟಿ, ಮೋಹನ್ ಶೇಣಿ, ರಾಜೇಶ್ ಧನಶಾಲೆ, ಪ್ರಕಾಶ್ ತುಮಿನಾಡು ಹಾಗೂ ದೀಪಕ್ ರೈ ಪಾಣಾಜೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ, ಸೂರಜ್, ಸೂರ್ಯ ಹಾಗೂ ರಾಧೇಶ್ ತಮ್ಮ ಹಾಸ್ಯಭರಿತ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ತಾಂತ್ರಿಕವಾಗಿಯೂ ‘ಅಭೇದ್ಯಂ’ಗೆ ಬಲಿಷ್ಠ ತಂಡವೇ ಸಾಥ್ ನೀಡಿದೆ. ಮಯೂರ್ ಆರ್. ಶೆಟ್ಟಿ ಛಾಯಾಗ್ರಹಣ, ವರುಣ್ ಉಣ್ಣೆ ಹಾಗೂ ಕಿಶೋರ್ ಕುಮಾರ್ ಶೆಟ್ಟಿ ಸಂಗೀತ, ವರುಣ್ ಉಣ್ಣಿ ಹಿನ್ನೆಲೆ ಸಂಗೀತ, ವಾಸುಕಿ ವೈಭವ್ ಗಾಯನ, ಗಣೇಶ್ ನೀರ್ಚಾಲ್ ಸಂಕಲನ, ಯುವ ಶೆಟ್ಟಿ ಕಾಸ್ಟಿಂಗ್ ಹಾಗೂ ಸಂಭಾಷಣೆ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.

ಮಾಸ್ ಮಾದ ಅವರ ಸಾಹಸ ನಿರ್ದೇಶನ, ಮಹೇಶ್ ಏನ್ನೂರು ಅವರ ಕಲಾ ನಿರ್ದೇಶನ, ಸೂರಜ್ ಹಾಗೂ ತರುಣ್ ರಾಜ್ ನೃತ್ಯ ನಿರ್ದೇಶನ ಮತ್ತು ಸುಶ್ರುತ್ ಭಟ್ ಅವರ ವಿಎಫ್‌ಎಕ್ಸ್ ಚಿತ್ರಕ್ಕೆ ಮತ್ತಷ್ಟು ಭರ್ಜರಿ ಮೆರುಗು ನೀಡಲಿದೆ.

ದೈವಿಕ ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಭಯಾನಕತೆಯ ಮಿಶ್ರಣದೊಂದಿಗೆ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿರುವ ‘ಅಭೇದ್ಯಂ’ 2026ರ ನವೆಂಬರ್‌ನಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.