“ಗಣೇಶ ಚತುರ್ಥಿ ಬದಲಾಗುತ್ತಿರುವ ಆಚರಣೆ, ಬದಲಾಗದ ಭಕ್ತಿ: ಗಣೇಶನ ಆರಾಧನೆಯಲ್ಲಿದೆ ಬದುಕಿನ ಸಂದೇಶ”

0
13

ಇಂದು ಗಣೇಶ ಚತುರ್ಥಿ. ಮನೆ ಮನೆಯಲ್ಲಿ, ಬೀದಿ ಬೀದಿಯಲ್ಲಿ ಗಣಪತಿ ಬಂದಿದ್ದಾನೆ. ಆದರೆ ಗಮನಿಸಿ, ಹಬ್ಬ ಆಚರಿಸುವ ರೀತಿ ಬದಲಾಗಿದೆ, ಆದರೆ ಭಕ್ತಿ ಮಾತ್ರ ಬದಲಾಗಿಲ್ಲ. ಇದರಲ್ಲೇ ನಮ್ಮ ಬದುಕಿನ ದೊಡ್ಡ ಪಾಠ ಅಡಗಿದೆ.

ಹಿಂದೆಲ್ಲ ಹೇಗಿತ್ತು ನೆನಪಿಸಿಕೊಳ್ಳಿ. ನಮ್ಮ ಅಜ್ಜ ಮಣ್ಣಿನ ಗಣಪತಿ ಮಾಡುತ್ತಿದ್ದರು. ಕೆರೆ ಮಣ್ಣು, ಅರಿಶಿನ, ಕುಂಕುಮ. ಎರಡು ಅಡಿ ಎತ್ತರ, ಪೂಜೆ ಮಾಡಿ ಮನೆಯ ಹಿಂದಿನ ಬಾವಿಯಲ್ಲೇ ವಿಸರ್ಜನೆ. ಈಗ ಹೇಗಿದೆ? 20 ಅಡಿ ಗಣಪತಿ, ಪಿ.ಓ.ಪಿ, ರಾಸಾಯನಿಕ ಬಣ್ಣ, ಡಿ.ಜೆ ಸೌಂಡು, ಲೇಸರ್ ಲೈಟು. ಆಚರಣೆ ಸಂಪೂರ್ಣ ಬದಲಾಗಿದೆ.

ಆದರೆ ಒಂದು ಪ್ರಶ್ನೆ ಕೇಳಿಕೊಳ್ಳಿ ಮಣ್ಣಿನ ಗಣಪತಿ ಮುಂದೆ ಕೈ ಮುಗಿಯುವಾಗ ಇದ್ದ ಭಕ್ತಿ, ಈಗ ದೊಡ್ಡ ಗಣಪತಿ ಮುಂದೆಯೂ ಅದೇ ಇದೆಯಲ್ಲವೇ? ಅಜ್ಜನ ಕಣ್ಣಲ್ಲಿ ಇದ್ದ ಕಣ್ಣೀರು, ಇಂದು ಮೊಮ್ಮಗನ ಕಣ್ಣಲ್ಲೂ ಅದೇ ಇದೆಯಲ್ಲವೇ? ಇದರರ್ಥ ಆಚರಣೆ ಬದಲಾಗಬಹುದು, ಭಕ್ತಿ ಬದಲಾಗಬಾರದು.

ಇದೇ ಬದುಕು ಕೂಡಾ. ಕಾಲ ಬದಲಾಗುತ್ತದೆ, ನಾವು ಕೆಲಸ ಮಾಡುವ ವಿಧಾನ ಬದಲಾಗುತ್ತದೆ, ನಾವು ಉಡುವ ಬಟ್ಟೆ ಬದಲಾಗುತ್ತದೆ, ಮೊಬೈಲ್ ಬಂದಿದೆ, ಇಂಟರ್ನೆಟ್ ಬಂದಿದೆ. ಆದರೆ ಮನುಷ್ಯತ್ವ, ಪ್ರೀತಿ, ಗೌರವ, ಪ್ರಾಮಾಣಿಕತೆ ಇವು ಎಂದಿಗೂ ಬದಲಾಗಬಾರದು. ಅದೇ ಗಣೇಶನ ಮೊದಲ ಸಂದೇಶ.

ಗಣಪತಿಯಲ್ಲಿದೆ ಬದುಕಿನ ವಿಜ್ಞಾನ:
ದೊಡ್ಡ ತಲೆ ದೊಡ್ಡ ಯೋಚನೆ:
ಗಣಪತಿಯ ತಲೆ ದೊಡ್ಡದು. ಅದು ಹೇಳುತ್ತದೆ, ದೊಡ್ಡದಾಗಿ ಯೋಚಿಸು. ಚಿಕ್ಕಪುಟ್ಟ ವಿಷಯಕ್ಕೆ ಜಗಳ ಮಾಡಬೇಡ. ನಿನ್ನ ಯೋಚನೆ ದೊಡ್ಡದಾದರೆ ನಿನ್ನ ಬದುಕೂ ದೊಡ್ಡದಾಗುತ್ತದೆ.

ಸಣ್ಣ ಕಣ್ಣು ಸೂಕ್ಷ್ಮ ದೃಷ್ಟಿ:
ಗಣಪತಿಯ ಕಣ್ಣು ಚಿಕ್ಕದು. ಅದು ಹೇಳುತ್ತದೆ, ಎಲ್ಲವನ್ನೂ ಸೂಕ್ಷ್ಮವಾಗಿ ನೋಡು. ಯಾವುದನ್ನೂ ಮೇಲ್ನೋಟಕ್ಕೆ ನಂಬಬೇಡ. ಸತ್ಯವನ್ನು ಹುಡುಕು. ಇದೇ ಇಂದು ವಿಜ್ಞಾನ ಹೇಳುವ ಅಬ್ಬಸೆರ್ವಶನ್ ಪವರ್ .

ದೊಡ್ಡ ಕಿವಿ ಹೆಚ್ಚು ಕೇಳು, ಕಡಿಮೆ ಮಾತಾಡು:
ಗಣಪತಿಯ ಕಿವಿ ದೊಡ್ಡದು, ಬಾಯಿ ಚಿಕ್ಕದು. ಇಂದಿನ ಯುವಕರಿಗೆ ಇದಕ್ಕಿಂತ ದೊಡ್ಡ ಸಂದೇಶ ಇನ್ನೊಂದಿಲ್ಲ. ನಾವು ಮಾತಾಡುವುದು ಜಾಸ್ತಿ, ಕೇಳುವುದು ಕಮ್ಮಿ. ಗಣಪತಿ ಹೇಳುತ್ತಾನೆ, ಮೊದಲು ಕೇಳು, ನಂತರ ಮಾತಾಡು.

ಇಲಿ ವಾಹನ ಚಿಕ್ಕವರನ್ನು ಗೌರವಿಸು:
ಸಿಂಹದ ಮೇಲೆ ಕುಳಿತ ದುರ್ಗೆಯನ್ನು ನೋಡಿದ್ದೇವೆ, ಆದರೆ ಇಲಿ ಮೇಲೆ ಕುಳಿತ ದೇವರು ಗಣಪತಿ ಒಬ್ಬನೇ. ಇಲಿ ಎಂದರೆ ಚಿಕ್ಕ ಜೀವಿ. ದೊಡ್ಡ ದೇವರು ಚಿಕ್ಕ ಜೀವಿಯ ಮೇಲೆ ಕುಳಿತಿದ್ದಾನೆ ಎಂದರೆ, ದೊಡ್ಡವನು ಸಣ್ಣವರನ್ನು ಗೌರವಿಸಬೇಕು ಎಂಬ ಸಂದೇಶ. ಮನೆಯಲ್ಲಿ ಕೆಲಸದವರನ್ನು, ಕಂಪನಿಯಲ್ಲಿ ನೌಕರರನ್ನು ಗೌರವಿಸಿ.

ಒಂದು ದಂತ ಮುರಿದಿದೆ ತ್ಯಾಗ: ಗಣಪತಿ ತನ್ನದೇ ದಂತವನ್ನು ಮುರಿದು ಬರೆದ ಎನ್ನುತ್ತದೆ ಪುರಾಣ. ಅಂದರೆ ಒಳ್ಳೆಯ ಕೆಲಸಕ್ಕಾಗಿ ಸ್ವಲ್ಪ ತ್ಯಾಗ ಮಾಡಬೇಕು. ನಾವು ಎಲ್ಲವೂ ನನಗೇ ಬೇಕು ಎನ್ನುತ್ತೇವೆ, ಗಣಪತಿ ತನ್ನದನ್ನೇ ಕೊಟ್ಟ.

ಬದಲಾಗಬೇಕಾದ ಆಚರಣೆ:
ಭಕ್ತಿ ಬದಲಾಗಬಾರದು ನಿಜ, ಆದರೆ ಆಚರಣೆ ಬದಲಾಗಬೇಕು. ಈ ವರ್ಷದ ಗಣೇಶ ಚತುರ್ಥಿ ನಮಗೆ ಒಂದು ಅವಕಾಶ.

ಪಿ.ಓ.ಪಿ ಗಣಪತಿ ಬೇಡ, ಮಣ್ಣಿನ ಗಣಪತಿ ಇರಲಿ. ಏಕೆಂದರೆ ಮಣ್ಣು ನೀರಲ್ಲಿ ಕರಗುತ್ತದೆ, ಕೆರೆಗೆ ಹಾನಿ ಇಲ್ಲ. ಪಿ.ಓ.ಪಿ ಕರಗುವುದಿಲ್ಲ, ಅದು ಮೀನನ್ನು ಕೊಲ್ಲುತ್ತದೆ. ನಮ್ಮ ಭಕ್ತಿಯಿಂದ ಇನ್ನೊಂದು ಜೀವ ಸಾಯಬಾರದು.
ಡಿ.ಜೆ ಸೌಂಡು ಬೇಡ, ಡೋಲು, ತಮಟೆ ಇರಲಿ. ಡಿ.ಜೆ ಯಿಂದ ಕಿವಿ ಹಾಳಾಗುತ್ತದೆ, ಹೃದಯಕ್ಕೆ ತೊಂದರೆ. ನಮ್ಮ ಹಬ್ಬ ಇನ್ನೊಬ್ಬರಿಗೆ ಕಾಯಿಲೆ ತರಬಾರದು.
ಈ ಬಾರಿ ಗಣಪತಿಗೆ ಪ್ಲಾಸ್ಟಿಕ್ ಹೂವಿನ ಹಾರ ಬೇಡ, ನಮ್ಮ ತೋಟದ ನಿಜವಾದ ಹೂವು ಇರಲಿ.

ಕೊನೆಯ ಸಂದೇಶ:
ಗಣೇಶ ಎಂದರೆ ವಿಘ್ನ ನಿವಾರಕ. ವಿಘ್ನ ಎಂದರೆ ಹೊರಗಿನ ಅಡ್ಡಿ ಅಲ್ಲ, ನಿನ್ನೊಳಗಿನ ಅಡ್ಡಿ. ಸೋಮಾರಿತನ, ಅಹಂಕಾರ, ಹೊಟ್ಟೆಕಿಚ್ಚು, ದ್ವೇಷ ಇವೇ ನಿಜವಾದ ವಿಘ್ನಗಳು. ಗಣಪತಿಯನ್ನು ಹೊರಗೆ ಪೂಜಿಸುವುದಕ್ಕಿಂತ, ನಿನ್ನೊಳಗಿನ ಈ ವಿಘ್ನಗಳನ್ನು ತೆಗೆದುಹಾಕು. ಆಗ ನಿಜವಾದ ಗಣೇಶ ಚತುರ್ಥಿ.

ಈ ಹಬ್ಬ ಕೇವಲ ಪಟಾಕಿ, ಸಿಹಿ ತಿನ್ನುವ ಹಬ್ಬ ಅಲ್ಲ. ಕತ್ತಲೆಯಿಂದ ಬೆಳಕಿನಡೆಗೆ, ಅಜ್ಞಾನದಿಂದ ವಿಜ್ಞಾನದಡೆಗೆ, ನಾನು ಎಂಬುವುದರಿಂದ ನಾವೆಲ್ಲ ಎಂಬುವುದರ ಕಡೆಗೆ ಹೋಗುವ ಹಬ್ಬ.

ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು. ನಿಮ್ಮ ಮನೆಯ ಗಣಪತಿ ಮಣ್ಣಿನದಾಗಿರಲಿ, ನಿಮ್ಮ ಮನಸ್ಸಿನ ಭಕ್ತಿ ಚಿನ್ನದಂತಿರಲಿ!

ಬರಹ: ಕೆ ಎಸ್ ಜಯಶಂಕರ್