ಗುಂಡ್ಯಡ್ಕ ವಿಠೋಬಾ ರುಕುಮಾಯಿ ಸನ್ನಿಧಿಯಲ್ಲಿ ಭಜನಾಮೃತದ ಭಕ್ತಿಸೌರಭ

0
63

14 ಭಜನಾ ತಂಡಗಳಿಂದ ಅಖಂಡ ನಾಮಸಂಕೀರ್ತನೆ : ಲಕ್ಷ್ಮೀಕಾಂತ ಮತ್ತು ಕುಟುಂಬದ ಸೇವಾ ಸಮರ್ಪಣೆ

ಭಕ್ತಿ, ನಾಮಸ್ಮರಣೆ ಹಾಗೂ ಸೇವೆಯ ಸೊಬಗನ್ನು ಸಾರುವ ‘ಭಜನಾಮೃತ’ ಕಾರ್ಯಕ್ರಮವು ಸೆ. 22ರಂದು ಗುಂಡ್ಯಡ್ಕದ ಶ್ರೀನಿವಾಸಪುರದಲ್ಲಿರುವ ವಿಠೋಬಾ ರುಕುಮಾಯಿ ದೇವಸ್ಥಾನದ ಸನ್ನಿಧಿಯಲ್ಲಿ ಭಕ್ತಿಪೂರ್ವಕವಾಗಿ ನಡೆಯಲಿದೆ.

ಬೆಳಗ್ಗೆ 9ರಿಂದ ರಾತ್ರಿ 12 ಗಂಟೆಯವರೆಗೆ ನಡೆಯುವ ಈ ವಿಶೇಷ ಭಜನಾ ನಾಮಸಂಕೀರ್ತನೆಯಲ್ಲಿ ಒಟ್ಟು 14 ಭಜನಾ ತಂಡಗಳು ಪಾಲ್ಗೊಂಡು ಭಕ್ತಿಯ ಕಂಪನ್ನು ಪಸರಿಸಲಿವೆ.

ಕಾರ್ಯಕ್ರಮದ ಅಂಗವಾಗಿ ಪ್ರಾರ್ಥನೆ, ಪವಮಾನ ಅಭಿಷೇಕ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.

ಬಳಿಕ ವಿವಿಧ ಭಜನಾ ತಂಡಗಳಿಂದ ಭಜನೆ, ನಾಮಸಂಕೀರ್ತನೆ, ಕೀರ್ತನೆ, ಹಾಗೂ ಭಕ್ತಿಗೀತೆಗಳ ಗಾಯನ ನಡೆಯಲಿದೆ. ದಿನವಿಡೀ ನಡೆಯುವ ಈ ಭಕ್ತಿಸೇವೆಯು ಭಕ್ತರ ಮನದಲ್ಲಿ ಆಧ್ಯಾತ್ಮಿಕ ಚೈತನ್ಯ ಹಾಗೂ ಶಾಂತಿಯ ಅನುಭೂತಿಯನ್ನು ಮೂಡಿಸುವ ಕಾರ್ಯಕ್ರಮವಾಗಿದೆ.

ಭಕ್ತಿಯನ್ನೇ ಬದುಕಿನ ಮಾರ್ಗವನ್ನಾಗಿ ಸಾರುವ ವಿಠೋಬನ ಸನ್ನಿಧಿಯಲ್ಲಿ ನಾಮಸ್ಮರಣೆ, ಭಜನೆ ಮತ್ತು ಕೀರ್ತನೆಗಳಿಗೆ ವಿಶೇಷ ಮಹತ್ವವಿದೆ. ರುಕುಮಾಯಿಯ ಮಾತೃಸ್ನೇಹದ ಸಾನ್ನಿಧ್ಯದೊಂದಿಗೆ ವಿಠೋಬನ ಭಕ್ತವತ್ಸಲ ರೂಪವನ್ನು ಸ್ಮರಿಸುತ್ತಾ ಸಾಮೂಹಿಕವಾಗಿ ಜಪಿಸುವುದು ಭಕ್ತರ ಮನಸ್ಸಿಗೆ ನೆಮ್ಮದಿ ಹಾಗೂ ಸಾತ್ವಿಕತೆಯನ್ನು ನೀಡುತ್ತದೆ.

ಇಂತಹ ಪವಿತ್ರ ಸನ್ನಿಧಿಯಲ್ಲಿ ನಡೆಯುವ ಭಜನಾಮೃತವು ಭಕ್ತರ ಪಾಲಿಗೆ ಆಧ್ಯಾತ್ಮಿಕ ಅನುಭೂತಿಯ ಕ್ಷಣವಾಗಲಿದೆ.

ಕಳೆದ ಸುಮಾರು 15 ವರ್ಷಗಳಿಂದ ನಿರಂತರವಾಗಿ ಪ್ರತಿ ವರ್ಷ ಲಕ್ಷ್ಮೀಕಾಂತ ಮತ್ತು ಕುಟುಂಬ ನಿರಂತರವಾಗಿ ಸೇವಾಕರ್ತರಾಗಿ ನಿಂತಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ.

ವಿವಿಧ ಭಜನಾ ತಂಡಗಳು, ಸೇವಾಕರ್ತರು ಹಾಗೂ ಭಕ್ತರ ಸಹಕಾರದಿಂದ ನಡೆಯುವ ಈ ನಾಮಸಂಕೀರ್ತನೆಯು ಭಕ್ತಿ ಮತ್ತು ಸೇವೆಯ ಸುಂದರ ಸಂಗಮವಾಗಲಿದೆ.
ಭಕ್ತಿಯ ಸೌರಭ ಎಲ್ಲೆಡೆ ಪಸರಿಸಲಿ ಎಂಬ ಆಶಯದೊಂದಿಗೆ ನಡೆಯುವ ಈ ಭಜನಾಮೃತದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಠೋಬ ರುಕುಮಾಯಿ ದೇವರ ಕೃಪೆಗೆ ಪಾತ್ರರಾಗುವಂತೆ ಸೇವಾಕರ್ತರು ವಿನಂತಿಸಿದ್ದಾರೆ.

ಮಂದಾರ ರಾಜೇಶ್