ಬೊಲ್ಯೊಟ್ಟು ಆಲಡೆ ಜೀರ್ಣೋದ್ಧಾರಕ್ಕೆ ವಿಜ್ಞಾಪನಾ ಪತ್ರ ಬಿಡುಗಡೆ

0
19

ಪಡುಬಿದ್ರಿ : ಬೊಲ್ಯೊಟ್ಟು ಆಲಡೆಯ ಸಮಗ್ರ ಜೀರ್ಣೋದ್ಧಾರ ಕಾರ್ಯವು ಸುಮಾರು ₹5 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಇದರ ಅಂಗವಾಗಿ ವಿಜ್ಞಾಪನಾ ಪತ್ರವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಜನಪದ ಸಂಶೋಧಕ ಕೆ.ಎಲ್. ಕುಂಡಂತಾಯ, ಯಾವುದೇ ಧಾರ್ಮಿಕ ಕ್ಷೇತ್ರದ ಜೀರ್ಣೋದ್ಧಾರ ಮಾಡುವಾಗ ಅದರ ಮೂಲ ಇತಿಹಾಸ, ಆಚರಣೆ, ಸಂಪ್ರದಾಯ ಹಾಗೂ ಸ್ವರೂಪದ ಕುರಿತು ಸ್ಪಷ್ಟವಾದ ಅರಿವು ಹೊಂದಿರಬೇಕು. ಈ ಸ್ಪಷ್ಟತೆ ಇದ್ದಾಗ ಮಾತ್ರ ಜೀರ್ಣೋದ್ಧಾರ ಕಾರ್ಯವನ್ನು ಕ್ಷೇತ್ರದ ಪರಂಪರೆಗೆ ಅನುಗುಣವಾಗಿ ನಡೆಸಲು ಸಾಧ್ಯ ಎಂದರು.

“ಆಲಡೆ ದೇವಸ್ಥಾನವಾಗಿ ಪರಿವರ್ತನೆಯಾಗಬಾರದು” ಎಂದು ಪ್ರತಿಪಾದಿಸಿದ ಅವರು, ದೇವಸ್ಥಾನದ ರೀತಿಯ ಕೆಲವು ನಿಯಮ ಹಾಗೂ ಸಂಪ್ರದಾಯಗಳು ಇದ್ದರೂ ಕುಮಾರ ಮತ್ತು ಸಿರಿಗಳ ನೆಲೆ ಇರುವ ಕ್ಷೇತ್ರವನ್ನು ದೇವಸ್ಥಾನವೆಂದು ಪರಿಗಣಿಸಲು ಸಾಧ್ಯವಿಲ್ಲ. ಅದು ಆಲಡೆಯಾಗಿಯೇ ತನ್ನ ಮೂಲ ಸ್ವರೂಪದಲ್ಲಿ ಉಳಿಯಬೇಕು ಎಂದು ಹೇಳಿದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಒಟ್ಟು 74 ಸಿರಿ ಆಲಡೆಗಳಿವೆ. ಅವುಗಳಲ್ಲಿ ಹಲವು ಆಲಡೆಗಳ ಜೀರ್ಣೋದ್ಧಾರದ ಸಂದರ್ಭದಲ್ಲಿ ಮೂಲ ಸ್ವರೂಪದಲ್ಲಿ ಬದಲಾವಣೆಗಳಾಗಿವೆ. ಸಿರಿ ಹಾಗೂ ಕುಮಾರರ ಸ್ವರೂಪ ಮತ್ತು ಸಂಬಂಧದ ಬಗ್ಗೆ ಪಾಡ್ದನಗಳಲ್ಲಿ ಉಲ್ಲೇಖಗಳಿದ್ದರೂ, ಅವುಗಳ ಕುರಿತು ಸಮರ್ಪಕ ತಿಳುವಳಿಕೆ ಇಲ್ಲದೆ ಆಚರಣೆಗಳಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ ಎಂದು ಕುಂಡಂತಾಯ ಹೇಳಿದರು.

ಬೊಲ್ಯೊಟ್ಟು ಆಲಡೆಯ ಜೀರ್ಣೋದ್ಧಾರ ಕಾರ್ಯದಲ್ಲಿ ಕ್ಷೇತ್ರದ ಮೂಲ ಪರಂಪರೆ, ಸಂಪ್ರದಾಯ ಹಾಗೂ ಆಚರಣೆಗಳಿಗೆ ಆದ್ಯತೆ ನೀಡಬೇಕು. ಮುಂದಿನ ಪೀಳಿಗೆಗೂ ಕ್ಷೇತ್ರದ ಇತಿಹಾಸ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಉಳಿಯುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯಬೇಕು ಎಂದು ಅವರು ತಿಳಿಸಿದರು.

ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೊಲ್ಯೊಟ್ಟು ಆಲಡೆಯ ಸಮಗ್ರ ಜೀರ್ಣೋದ್ಧಾರ ಕಾರ್ಯಕ್ಕೆ ಶಾಸಕನಾಗಿ ಸರ್ಕಾರದ ಮಟ್ಟದಲ್ಲಿಯೂ ಹಾಗೂ ವೈಯಕ್ತಿಕ ನೆಲೆಯಲ್ಲಿಯೂ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಮಾತನಾಡಿದರು. ಕ್ಷೇತ್ರದ ತಂತ್ರಿ ಹರೀಶ್ ಜೋಯಿಸ, ಅರ್ಚಕ ಗಣೇಶ್ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸುಂದರ ಶೆಟ್ಟಿ ಬೆಳ್ಳಿಬೆಟ್ಟುಗುತ್ತು, ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ, ಆಡಳಿತ ಮಂಡಳಿ ಅಧ್ಯಕ್ಷ ಯುವರಾಜ್ ಶೆಟ್ಟಿ, ನಾಗೇಶ್ ಭಟ್ ಪಾಂಡ್ಯಾರು ಹಾಗೂ ಕೋಶಾಧಿಕಾರಿ ಉದಯ ಹೆಗ್ಡೆ ದಾರಡಗುತ್ತು, ಪ್ರಚಾರ ಸಮಿತಿ ಉಸ್ತುವಾರಿ ಮಹೇಶ್ ಶೆಟ್ಟಿ ಪಣಿಯೂರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೆ.ಎಲ್. ಕುಂಡಂತಾಯ, ಯೋಗೀಶ್ ಶೆಟ್ಟಿ ಬಾಲಾಜಿ ಸೇರಿದಂತೆ ಕ್ಷೇತ್ರದ ಪ್ರಮುಖರು, ಜೀರ್ಣೋದ್ಧಾರ ಸಮಿತಿ ಸದಸ್ಯರು ಹಾಗೂ ಭಕ್ತರು ಭಾಗವಹಿಸಿದ್ದರು. ಹರೀಶ್ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.