ಕಾಪು : ವಿಪರೀತ ಮದ್ಯಪಾನದ ಚಟ ಹೊಂದಿದ್ದ ರಿಕ್ಷಾ ಚಾಲಕರೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಮೂಡಬೆಟ್ಟು ಗ್ರಾಮದ ಪ್ರಾಣೇಶ್ (44) ಎಂದು ಗುರುತಿಸಲಾಗಿದೆ. ಇವರು ಸುಭಾಷ್ ನಗರ ನಿಲ್ದಾಣದಲ್ಲಿ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಸೆ.19ರಂದು ರಾತ್ರಿ ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣ ಕುಟುಂಬಸ್ಥರು ಗಮನಿಸಿ ಅಗತ್ಯ ಕ್ರಮ ಕೈಗೊಂಡರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ವಿಪರೀತ ಮದ್ಯಪಾನದ ಚಟದಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

