
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ವತಿಯಿಂದ ಬೆಟ್ಟಂಪಾಡಿ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ–21 ಯಶಸ್ವಿ
ಬೆಟ್ಟಂಪಾಡಿ : ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಬೆಟ್ಟಂಪಾಡಿ ಗ್ರಾಮ ಪಂಚಾಯತ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಹಾಗೂ ಕನ್ನಡ ಸಂಘ ಬೆಟ್ಟಂಪಾಡಿ ಇವರ ಸಹಕಾರದಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅವರ ಪ್ರಾಯೋಜಕತ್ವದಲ್ಲಿ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಅಭಿಯಾನದ ಅಂಗವಾಗಿ ಆಯೋಜಿಸಲಾಗುತ್ತಿರುವ ‘ಗ್ರಾಮ ಸಾಹಿತ್ಯ ಸಂಭ್ರಮ ಸರಣಿ–21’ ಕಾರ್ಯಕ್ರಮವು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯಿತು.
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ಧರ್ಮಪಾಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಾಮ ಸಮ್ಮೇಳನದಲ್ಲಿ ಭಾಗವಹಿಸಲು ಇದೇ ಮೊದಲ ಅವಕಾಶ ದೊರೆತಿರುವುದು ಸಂತಸದ ಸಂಗತಿಯಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಇದ್ದರೂ ಅದನ್ನು ಬೆಳೆಸಿಕೊಳ್ಳಲು ಇಂತಹ ವೇದಿಕೆಗಳು ಹಿಂದೆ ಲಭ್ಯವಿರಲಿಲ್ಲ. ಆದರೆ ಇಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬಳಿಗೇ ಸಾಹಿತ್ಯವನ್ನು ಕೊಂಡೊಯ್ದು, ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ‘ಗ್ರಾಮ ಸಾಹಿತ್ಯ ಸಂಭ್ರಮ’ದಂತಹ ಕಾರ್ಯಕ್ರಮಗಳು ಉತ್ತಮ ಅವಕಾಶವನ್ನು ಒದಗಿಸುತ್ತಿವೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಟ್ಟಂಪಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ರಜಾಕ್ ಕೆ. ಮಾತನಾಡಿ, ವಿವಿಧ ಹಿನ್ನೆಲೆಯ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಗ್ರಾಮ ಸಾಹಿತ್ಯ ಸಂಭ್ರಮ ಅವಕಾಶ ಕಲ್ಪಿಸಿದೆ ಎಂದರು. ಕನ್ನಡಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ ಹಾಗೂ ಹಲ್ಮಿಡಿ ಶಾಸನವು ಕನ್ನಡದ ಪ್ರಾಚೀನತೆಯನ್ನು ಸಾರುತ್ತದೆ ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ ಅವರು ‘ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಸುರೇಂದ್ರ ರೈ, ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ನವೀನ್ ರೈ ಚೆಲ್ಯಡ್ಕ, ಚಿಗುರೆಲೆ ಸಾಹಿತ್ಯ ಬಳಗದ ಅಧ್ಯಕ್ಷ ಶ್ರೀ ಚಂದ್ರಮೌಳಿ ಕಡಂದೇಲು, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶಾಲಿನಿ ಬಿ. ಶೆಟ್ಟಿ ಹಾಗೂ ನಾರಾಯಣ ಡಿ. ಅವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ದಾಮೋದರ ಕಣಜಾಲು ಸ್ವಾಗತಿಸಿದರು. ಗ್ರಾಮ ಸಾಹಿತ್ಯ ಸಂಭ್ರಮದ ಸಂಯೋಜಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಡಿನಾಡು ಶ್ರೇಯೋಭಿವೃದ್ಧಿ ಟ್ರಸ್ಟ್ (ರಿ.), ಆರ್ಲಪದವು ಇದರ ಅಧ್ಯಕ್ಷ ಡಾ. ಹಾಜಿ ಅಬೂಬಕ್ಕರ್ ಎಸ್. ಆರ್ಲಪದವು ಸನ್ಮಾನ ಭಾಷಣ ಮಾಡಿದರು.
ವಿದ್ಯಾರ್ಥಿಗಳೇ ಕೇಂದ್ರಬಿಂದು
ಈ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿನಿ ಕು. ವೇದಾವತಿ ಬಿ. ಅವರು ಸರ್ವಾಧ್ಯಕ್ಷತೆ ವಹಿಸಿದ್ದರು. ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕು. ಪ್ರನ್ವಿ ಪ್ರಸಾದ್ ಅವರು ಸಮಾರೋಪ ಭಾಷಣಗೈದರು.
ಕಾರ್ಯಕ್ರಮದ ಅಂಗವಾಗಿ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 15 ಶಾಲೆಗಳಲ್ಲಿ ಶಾಲಾ ಮಟ್ಟದಲ್ಲಿ ವಿವಿಧ ಸಾಹಿತ್ಯಿಕ ಗೋಷ್ಠಿಗಳನ್ನು ನಡೆಸಲಾಗಿತ್ತು. ಈ ವಿವಿಧ ಗೋಷ್ಠಿಗಳಲ್ಲಿ ಒಟ್ಟು 15 ಶಾಲೆಗಳ ಸುಮಾರು 203 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಹಿನ್ನೆಲೆಯಲ್ಲಿ ಕವಿಗೋಷ್ಠಿ, ಕಥಾಗೋಷ್ಠಿ, ಪ್ರವಾಸ ಕಥನ, ‘ನನ್ನ ಆಪ್ತಮಿತ್ರ’ ಹಾಗೂ ‘ನನ್ನ ನೆಚ್ಚಿನ ಶಿಕ್ಷಕಿ/ಶಿಕ್ಷಕ’ ಸೇರಿದಂತೆ ವಿವಿಧ ಸಾಹಿತ್ಯಿಕ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಇರ್ದೆ ಮತ್ತು ಬೆಟ್ಟಂಪಾಡಿ ಗ್ರಾಮದ 16 ಸಾಧಕರಿಗೆ ಗೌರವ
ಬೆಟ್ಟಂಪಾಡಿ ಗ್ರಾಮದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ 16 ಸಾಧಕರನ್ನು ಕನ್ನಡದ ಪೇಟ, ಕನ್ನಡದ ಶಾಲು ಹಾಗೂ ಮೌಲ್ಯಯುತ ಕನ್ನಡ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಸಾಹಿತ್ಯ ಕ್ಷೇತ್ರದ ಶ್ರೀ ಮಂಜುಳಗಿರಿ ವೆಂಕಟರಮಣ ಭಟ್, ಪತ್ರಿಕಾ ಮಾಧ್ಯಮ ಕ್ಷೇತ್ರದ ಶ್ರೀ ಉಮೇಶ್ ಗೌಡ ಮಿತ್ತಡ್ಕ, ಜನಪದ ಕ್ಷೇತ್ರದ ಶ್ರೀ ಚೋಮ ಬೆಟ್ಟಂಪಾಡಿ, ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರದ ಡಾ. ಪ್ರಮೋದ್ ಕುಮಾರ್ ಎಂ.ಜಿ., ನಾಟಿ ವೈದ್ಯಕೀಯ ಕ್ಷೇತ್ರದ ಶ್ರೀಮತಿ ಕೈಝಮ್ಮ ಕೋನಡ್ಕ, ಶಿಕ್ಷಣ ಕ್ಷೇತ್ರದ ಶ್ರೀ ಯು. ದೇವಪ್ಪ ನಾಯ್ಕ ಉಪ್ಪಳಿಗೆ, ಕೃಷಿ ಕ್ಷೇತ್ರದ ಶ್ರೀಮತಿ ಅನಿತಾ ಕೂವೆಂಜ ಹಾಗೂ ಶ್ರೀ ಸುಬ್ಬಣ್ಣ ಗೌಡ ಪಾರ, ದಿವ್ಯಾಂಗರ ಸೇವೆಯ ಶ್ರೀಮತಿ ಶಶಿಕಲಾ, ವೈದ್ಯಕೀಯ ಕ್ಷೇತ್ರದ ಡಾ. ಶ್ರೀಕೃಷ್ಣ ಭಟ್, ಯಕ್ಷಗಾನ ಕ್ಷೇತ್ರದ ಶ್ರೀ ಸಂಜೀವ ರೈ ಅರೆಂಬ್ಯ, ಸಹಕಾರ ಮತ್ತು ಶಿಕ್ಷಣ ಕ್ಷೇತ್ರದ ಶ್ರೀ ಕೆ.ಎಸ್. ರಂಗನಾಥ ರೈ ಗುತ್ತು, ಸಮಾಜ ಸೇವೆಯ ಶ್ರೀ ಮೊಯಿದಿನ್ ಕುಂಞಿ, ಚಿತ್ರಕಲಾ ಕ್ಷೇತ್ರದ ಶ್ರೀ ಐ. ಗೋಪಾಲಕೃಷ್ಣ ರಾವ್, ವಂಶಪಾರಂಪರಿಕ ಜ್ಯೋತಿಷ್ಯ ಹಾಗೂ ಪೌರೋಹಿತ್ಯ ಕ್ಷೇತ್ರದ ಶ್ರೀ ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ ಹಾಗೂ ಕ್ರೀಡಾ ಕ್ಷೇತ್ರದ ಶ್ರೀ ದಯಾನಂದ ರೈ ಕೋರ್ಮಂಡ ಅವರನ್ನು ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು ಇದರ ನಿರ್ದೇಶಕರಾಗಿ ಆಯ್ಕೆಯಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ‘ವಿಶೇಷ ಸಾಧಕ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಜನಮನ ಗೆದ್ದ ಘಟನೆಗಳು
ಜನಪದ ಕ್ಷೇತ್ರದ ಸಾಧಕ ಶ್ರೀ ಚೋಮ ಬೆಟ್ಟಂಪಾಡಿ ಅವರು ಕನ್ನಡ ಹಾಗೂ ತುಳು ಭಾಷೆಯ ವಿಶಿಷ್ಟ ಜನಪದ ಗಾಯನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ನಾಟಿ ವೈದ್ಯಕೀಯ ಕ್ಷೇತ್ರದ ಸಾಧಕಿ ಶ್ರೀಮತಿ ಕೈಝಮ್ಮ ಕೋನಡ್ಕ ಅವರು ಸುಮಾರು 10 ತಿಂಗಳ ಮೊಮ್ಮಗುವಿನೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಮಗುವಿಗೂ ಕನ್ನಡದ ಶಾಲು ಹಾಗೂ ಕನ್ನಡ ಪುಸ್ತಕ ನೀಡಿ ಗೌರವಿಸಿದರು.
ಗ್ರಾಮದಿಂದ ಗ್ರಾಮಕ್ಕೆ ಸಾಹಿತ್ಯದ ಪಯಣ
‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಅಭಿಯಾನದ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಹಿತ್ಯದೊಂದಿಗೆ ನೇರ ಸಂಪರ್ಕ ಕಲ್ಪಿಸುವುದು ಹಾಗೂ ಗ್ರಾಮಗಳಲ್ಲಿರುವ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಈ ಅಭಿಯಾನವು ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ 32 ಗ್ರಾಮಗಳಲ್ಲಿಯೂ ಸಾಹಿತ್ಯದ ಚಟುವಟಿಕೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಮುಂದುವರಿದಿದೆ. ಬೆಟ್ಟಂಪಾಡಿ ಸರಣಿ–21ರ ಬಳಿಕ ಅಕ್ಟೋಬರ್ 2ರಂದು ಬಲ್ನಾಡಿನಲ್ಲಿ ನಡೆಯಲಿರುವ ಸರಣಿ–22ರೊಂದಿಗೆ ತಾಲೂಕಿನ ಎಲ್ಲಾ 32 ಗ್ರಾಮಗಳನ್ನೂ ತಲುಪುವ ಗುರಿ ಪೂರ್ಣಗೊಳ್ಳಲಿದೆ.
ವಿದ್ಯಾರ್ಥಿಗಳನ್ನೇ ಕಾರ್ಯಕ್ರಮದ ಕೇಂದ್ರಬಿಂದುವಾಗಿಸಿಕೊಂಡು, ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಗ್ರಾಮೀಣ ಭಾಗದ ಸಾಧಕರನ್ನು ಗುರುತಿಸಿ ಗೌರವಿಸುವ ಈ ಮಾದರಿಯ ಕಾರ್ಯಕ್ರಮವು ಸಾಹಿತ್ಯವನ್ನು ಗ್ರಾಮೀಣ ಬದುಕಿನೊಂದಿಗೆ ಬೆಸೆಯುವ ಪ್ರಯತ್ನವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ನೇತೃತ್ವದಲ್ಲಿ,ಗ್ರಾಮ ಸಾಹಿತ್ಯ ಸಂಚಾಲಕ ನಾರಾಯಣ ಕುಂಬ್ರ ಅವರ ಸಂಯೋಜನೆಯಲ್ಲಿ ಸಾಹಿತ್ಯ ಸೇವಕರು, ಶಿಕ್ಷಣ ಇಲಾಖೆ, ಗ್ರಾಮ ಪಂಚಾಯತ್‌ಗಳು, ಶಾಲಾ-ಕಾಲೇಜುಗಳು ಹಾಗೂ ಕನ್ನಡ ಸಂಘಗಳ ಸಹಕಾರದೊಂದಿಗೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ.
ಶ್ರೀಮತಿ ಆಶಾಮಯ್ಯ ಹಾಗೂ ಶ್ರೀಮತಿ ಆಶಾ ಅಡೂರ್ ಅವರು ಸಾಧಕರ ಪರಿಚಯ ಮಾಡಿದರು. ಸುಪ್ರಿತ ಚರಣ್ ಪಾಲಪ್ಪೆ, ಅಶ್ವಿಜ ಶ್ರೀಧರ್ ಬೆಳ್ತಂಗಡಿ ಹಾಗೂ ಗಿರೀಶ್ ಕೊಯಿಲ ಕಾರ್ಯಕ್ರಮ ನಿರೂಪಿಸಿದರು. ಶ್ರೀಶ ವಾಸವಿ ತುಳುನಾಡು ವಂದಿಸಿದರು.
ನವೋದಯ ಹೈಸ್ಕೂಲ್ ಬೆಟ್ಟಂಪಾಡಿಯ ಕು. ತೃಪ್ತಿ, ಕು. ಶ್ರೀಜಾ, ಕೃತಿಕಾ, ಕು. ಯಶ್ವಿನಿ ಹಾಗೂ ಕು. ಲತೀಕ್ಷಾ ಪ್ರಾರ್ಥನೆ ಸಲ್ಲಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕು. ಅಕ್ಷರ, ಕು. ಅರ್ಚನಾ, ಕು. ವಂದನಾ ಹಾಗೂ ತಂಡ ನಾಡಗೀತೆ ಹಾಡಿದರು.
