ಕಾಡುಹಂದಿ ಬೇಟೆಯಾಡಿ ಮಾಂಸ ದಾಸ್ತಾನು : ಆರೋಪಿ ಬಂಧನ

0
43

ಬೆಳ್ತಂಗಡಿ : ತಾಲೂಕಿನ ನೆರಿಯ ಗ್ರಾಮದಲ್ಲಿ ಅಕ್ರಮವಾಗಿ ಕಾಡುಹಂದಿಯನ್ನು ಬೇಟೆಯಾಡಿ, ಅದರ ಮಾಂಸವನ್ನು ದಾಸ್ತಾನು ಮಾಡಿಕೊಂಡಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಓರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ನೆರಿಯ ಗ್ರಾಮದ ಮುಚ್ಚಳ್ಳಿ ನಿವಾಸಿ ಕುಕ್ಕಪ್ಪ ಗೌಡ ಅವರ ಪುತ್ರ 38 ವರ್ಷದ ಸುರೇಶ್ ಎಂ.ಕೆ. ಎಂದು ಗುರುತಿಸಲಾಗಿದೆ.

ಸೆ.20ರಂದು ಮುಚ್ಚರಾಳಿ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ಸಂದರ್ಭ ಕಾಡುಹಂದಿ ಬೇಟೆಯಾಡಿರುವುದು ಪತ್ತೆಯಾಗಿದೆ. ಕಾರ್ಯಾಚರಣೆಯ ವೇಳೆ ಬೇಟೆಗೆ ಬಳಸಿದ್ದ ಕೋವಿ, ಕತ್ತಿ ಹಾಗೂ ಇತರ ಪರಿಕರಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.

ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮಹೇಶ್ ಎಂ. ದೇವಡಿಗ ಅವರ ಮಾರ್ಗದರ್ಶನದಲ್ಲಿ ನೆರಿಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ರವಿಚಂದ್ರ ಅವರು ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪತ್ತೆ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕಮಲಾ, ದೀಪಾ ವಿ. ಗಡಗಿ, ರಂಜಿತ್ ಕುಮಾರ್ ಎಸ್., ಪಿ.ಜಿ. ನಾಗೇಶ್ ಗೌಡ ಹಾಗೂ ಗಸ್ತು ಅರಣ್ಯ ಪಾಲಕ ವೀರೇಶ್ ಸಹಕರಿಸಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಧೀಶರ ಸಮಕ್ಷಮ ಹಾಜರುಪಡಿಸಲಾಗಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಕಾಡುಹಂದಿ ಬೇಟೆಯ ಹಿಂದೆ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.