ನದಿಗೆ ಉರುಳಿದ ಕಾರು : ಇಬ್ಬರು ಪವಾಡಸದೃಶ ಪಾರು

0
11

ಉಡುಪಿ : ಕೊಡವೂರಿನ ಚೆನ್ನಂಗಡಿ ಬಳಿ ಕಾರೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿಬಿದ್ದ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಚಾಲಕ ಹಾಗೂ ಮೂರು ವರ್ಷದ ಮಗು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರೊಂದು ನದಿಗೆ ಉರುಳುವುದನ್ನು ಗಮನಿಸಿದ ಸ್ಥಳೀಯ ಮೀನುಗಾರ ಗಣೇಶ್ ಅವರು ಯಾವುದೇ ವಿಳಂಬ ಮಾಡದೆ ಕೂಡಲೇ ನದಿಗೆ ಹಾರಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ಕಾರಿನೊಳಗೆ ಸಿಲುಕಿಕೊಂಡಿದ್ದ ಚಾಲಕ ಹಾಗೂ ಮಗುವನ್ನು ಸುರಕ್ಷಿತವಾಗಿ ಹೊರತೆಗೆದು ದಡಕ್ಕೆ ಕರೆತರುವಲ್ಲಿ ಅವರು ಯಶಸ್ವಿಯಾದರು.

ಘಟನೆ ನಡೆದ ತಕ್ಷಣ ಗಣೇಶ್ ಅವರು ತೋರಿದ ಸಮಯಪ್ರಜ್ಞೆ ಹಾಗೂ ಧೈರ್ಯದಿಂದಾಗಿ ಇಬ್ಬರ ಜೀವ ಉಳಿದಿದೆ. ಅಪಾಯವನ್ನು ಲೆಕ್ಕಿಸದೆ ನದಿಗೆ ಧುಮುಕಿ ರಕ್ಷಣಾ ಕಾರ್ಯ ನಡೆಸಿದ ಗಣೇಶ್ ಅವರ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರ ತಕ್ಷಣದ ಸ್ಪಂದನೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.