ಕಳವಾದ ಬುಲೆಟ್ ಮರಳಿ ಸಿಕ್ಕಿದ್ದೇ ಅಚ್ಚರಿ : ತಾಯಿಯ ಪವಾಡವೆಂದು ಭಕ್ತರ ನಂಬಿಕೆ!

0
43

ಪಣೋಲಿಬೈಲ್‌ ಶ್ರೀ ಕ್ಷೇತ್ರದ ಚಾಕಿರಿ ಮಾಡುವ (ಒತ್ತು ಮೂಲ್ಯಣ್ಣ) ರಮೇಶ್ ಕುಲಾಲ್ ಅವರ ಬುಲೆಟ್ ಬೈಕ್ ಕಳವಾಗಿದ್ದ ಘಟನೆಗೆ ಅಚ್ಚರಿಯ ತಿರುವು ಸಿಕ್ಕಿದೆ. ಬೈಕ್ ಕಳವಾದ ಆರು ದಿನಗಳ ಬಳಿಕ ಮಂಜೇಶ್ವರದಲ್ಲಿ ಪತ್ತೆಯಾಗಿದ್ದು, ಮಹಿಳೆಯೊಬ್ಬರು ಕರೆ ಮಾಡಿ ತಿಳಿಸಿದ ದೂರಿನ ಮೂಲಕ ಬೈಕ್ ಮತ್ತೆ ರಮೇಶ್ ಕುಲಾಲ್ ಅವರ ಕೈ ಸೇರಿದೆ.

ಅಕ್ಟೋಬರ್ 8ರಂದು ರಮೇಶ್ ಕುಲಾಲ್ ತಮ್ಮ ಬುಲೆಟ್ ಬೈಕ್ ಅನ್ನು ಬಿ.ಸಿ.ರೋಡ್ ಸಮೀಪದ ಬಾರ್ ಮುಂಭಾಗ ನಿಲ್ಲಿಸಿ ಕಟೀಲಿಗೆ ತೆರಳಿದ್ದರು. ಮರಳಿ ಬಂದಾಗ ಬೈಕ್ ನಾಪತ್ತೆಯಾಗಿತ್ತು. ಈ ಬಗ್ಗೆ ಅವರು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇತ್ತ ಬೈಕ್ ಕದ್ದ ವ್ಯಕ್ತಿ ಅದನ್ನು ಬೇರೆಯವರಿಗೆ ಮಾರಾಟ ಮಾಡಲು ಯೋಚಿಸಿ, ಯಾವುದೇ ದಾಖಲೆಗಳನ್ನು ನೀಡದೆ ₹30 ಸಾವಿರಕ್ಕೆ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದ ಎನ್ನಲಾಗಿದೆ. ಬಳಿಕ ವಾಹನದ ದಾಖಲೆಗಳನ್ನು ನೀಡುವುದಾಗಿ ಹೇಳಿ ತೆರಳಿದ್ದ.

ಮಹಿಳೆಯ ದೂರಿನಿಂದ ಬೈಕ್ ಪತ್ತೆ!

ಬಳಿಕ ಬೈಕ್ ಖರೀದಿಸಿದ ವ್ಯಕ್ತಿಗೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಕರೆ ಮಾಡಿ ದೂರು ನೀಡಿದ್ದು, ಈ ದೂರಿನ ಮೂಲಕ ಬೈಕ್‌ನ ಸುಳಿವು ಪೊಲೀಸರಿಗೆ ಲಭಿಸಿದೆ. ಅಂತಿಮವಾಗಿ ಕಳವಾಗಿದ್ದ ಬುಲೆಟ್ ಬೈಕ್ ಮಂಜೇಶ್ವರದಲ್ಲಿ ಪತ್ತೆಯಾಗಿದ್ದು, ಅಕ್ಟೋಬರ್ 14ರಂದು ರಮೇಶ್ ಕುಲಾಲ್ ಅವರಿಗೆ ಮರಳಿ ದೊರೆತಿದೆ.

ತಾಯಿಯ ಪವಾಡವೆಂದು ಭಕ್ತರ ನಂಬಿಕೆ!

ಶ್ರೀ ಕ್ಷೇತ್ರ ಪಣೋಲಿಬೈಲ್‌ನ ತಾಯಿ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಮೇಲಿನ ಅಪಾರ ಭಕ್ತಿಯನ್ನು ಹೊಂದಿರುವ ರಮೇಶ್ ಕುಲಾಲ್ ಅವರಿಗೆ ಈ ಘಟನೆ ವಿಶೇಷ ಅನುಭವ ನೀಡಿದೆ. ಮಹಿಳೆಯೊಬ್ಬರು ನೀಡಿದ ದೂರಿನಿಂದಲೇ ಬೈಕ್ ಮರಳಿ ಸಿಕ್ಕಿರುವುದನ್ನು ಕ್ಷೇತ್ರದ ತಾಯಿಯ ಕೃಪೆ ಹಾಗೂ ಕಟೀಲು ದೇವಿಯ ಪವಾಡವೆಂದು ಅವರು ಭಾವಿಸಿದ್ದಾರೆ.

ಬೈಕ್ ಕಳವಾದ ದಿನದಿಂದ ಮತ್ತೆ ಪತ್ತೆಯಾದವರೆಗಿನ ಆರು ದಿನಗಳ ಘಟನೆ ಭಕ್ತರಲ್ಲಿ ಕುತೂಹಲ ಮೂಡಿಸಿದ್ದು, ಮಹಿಳೆಯ ದೂರಿನಿಂದ ಬೈಕ್ ಮರಳಿ ಸಿಕ್ಕಿರುವುದು ವಿಶೇಷವಾಗಿದೆ.