ಚಿತ್ರಕಲಾ ಸ್ಪರ್ಧೆ ವಿದ್ಯಾರ್ಥಿಗಳ ಆತ್ಮವಿಶ್ವಾಸಕ್ಕೆ ವೇದಿಕೆ: ರಘುರಾಜ್ ಕದ್ರಿ

0
3

ಕೈಕಂಬ: ಚಿತ್ರಕಲಾ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ವಿಷಯಗಳನ್ನು ವಿಭಿನ್ನವಾಗಿ ಕಲ್ಪಿಸಿ ಚಿತ್ರಿಸುವ ಸಾಮರ್ಥ್ಯವನ್ನು ಬೆಳೆಸುವುದರ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸಿ, ಕಲಿಕೆಗೆ ಪೂರಕವಾಗುತ್ತವೆ ಎಂದು ಶ್ರೀ ಗೋಕರ್ಣನಾಥ ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ ಹೇಳಿದರು.

ಗಣೇಶೋತ್ಸವದ ಪ್ರಯುಕ್ತ ಮುಂಡಾಲ ಸಮಾಜ (ರಿ.) ಗುರುಪುರ ಕೈಕಂಬ ವತಿಯಿಂದ ಆಯೋಜಿಸಲಾಗಿದ್ದ “ಎನ್ನ ಉಡಲ್ದ ಗಣಪತಿ” ಚಿತ್ರಕಲಾ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

“ಚಿತ್ರ ಬಿಡಿಸುವ ಸ್ಪರ್ಧೆ ಕೇವಲ ಬಣ್ಣ ಮತ್ತು ಕುಂಚಗಳ ಆಟವಲ್ಲ. ಅದು ವಿದ್ಯಾರ್ಥಿಗಳ ಕಲ್ಪನೆಗೆ ರೆಕ್ಕೆ, ಸೃಜನಶೀಲತೆಗೆ ದಾರಿ ಹಾಗೂ ಆತ್ಮವಿಶ್ವಾಸಕ್ಕೆ ವೇದಿಕೆಯಾಗಿದೆ” ಎಂದು ರಘುರಾಜ್ ಕದ್ರಿ ಹೇಳಿದರು.

ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಾಂಗಳ ಬಾಬು ಕೊರಗ ಮಾತನಾಡಿ, ಸಮಾನತೆಗಾಗಿ ಹೋರಾಡಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಪ್ರತಿಯೊಬ್ಬರ ಮನಸ್ಸಿನಲ್ಲೂ ಬೆಳಗಬೇಕು. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಅವರ ಕುರಿತ ಚಿತ್ರಕಲಾ ಸ್ಪರ್ಧೆಯನ್ನೂ ಆಯೋಜಿಸುವಂತಾಗಲಿ ಎಂದು ಆಶಿಸಿದರು.

ಸುರೇಶ್ ಬಲಿಪತೋಟ ಮಾತನಾಡಿ, ಚಿತ್ರಕಲಾ ಸ್ಪರ್ಧೆಗಳು ವಿದ್ಯಾರ್ಥಿಗಳ ಮನಸ್ಸು ಹಾಗೂ ಸೃಜನಶೀಲತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಸುನೀಲ್ ಕಂದಾವರ ಪದವು, ಮಂಗಳೂರು ಮಹಾನಗರ ಪಾಲಿಕೆಯ ಬಡತನ ನಿರ್ಮೂಲನಾ ಕೋಶದ ಅಧಿಕಾರಿ ಚಿತ್ತರಂಜನ್ ದಾಸ್, ಶ್ರೀನಿವಾಸ್ ಎಂ., ಕೃಷ್ಣ ಕುಳಾಯಿ, ಮಹೇಶ್ ಅಮೀನ್ ಮುಲ್ಲಕಾಡ್, ನಾಗೇಶ್ ಕೋಟ್ಯಾನ್ ಎದುರುಪದವು ಹಾಗೂ ವೇದವ್ಯಾಸ ಕುಳಾಯಿ ಉಪಸ್ಥಿತರಿದ್ದರು.

ಸ್ಪರ್ಧೆಯ ಫಲಿತಾಂಶ:
1ರಿಂದ 4ನೇ ತರಗತಿ: ಪ್ರಥಮ – ಕಿನ್ನಿಕಂಬಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗಂಗಪ್ಪ; ದ್ವಿತೀಯ – ಮಾಯಪ್ಪ; ತೃತೀಯ – ಕು. ಹನ್ವಿಕಾ.

5ರಿಂದ 7ನೇ ತರಗತಿ: ಪ್ರಥಮ – ಯಶ್ವಾನ್; ದ್ವಿತೀಯ – ಕು. ತನ್ವಿ; ತೃತೀಯ – ಕು. ವಿಂದ್ಯಾಲಕ್ಷ್ಮೀ.

ಪ್ರೌಢಶಾಲಾ ವಿಭಾಗ: ಪ್ರಥಮ – ಬಡಗ ಎಕ್ಕಾರ್ ಪ್ರೌಢಶಾಲೆಯ ಯಜ್ಞೇಶ್; ದ್ವಿತೀಯ – ಕಿನ್ನಿಕಂಬಳ ಪ್ರೌಢಶಾಲೆಯ ಮಂಜುನಾಥ್; ತೃತೀಯ – ವಿಶೃತ್.

ಅಕ್ಷತಾ ಪ್ರಾರ್ಥಿಸಿದರು. ವಿಠ್ಠಲ ಆಳ್ವ ಪೊರ್ಕೋಡಿ ಸ್ವಾಗತಿಸಿದರು. ಜಯಂತ್ ಕೊಳಂಬೆ ಧನ್ಯವಾದ ಅರ್ಪಿಸಿದರು. ಚೇತನ್ ಕಾಜಿಲ ಕಾರ್ಯಕ್ರಮ ನಿರೂಪಿಸಿದರು.