ರಸಗುಲ್ಲಾ ಎಂದು ಭಾವಿಸಿ ಬಾಂಬ್ ಬಾಯಿಗೆ ಹಾಕಿದ ವ್ಯಕ್ತಿ; ಸ್ಫೋಟಕ್ಕೆ ಸ್ಥಳದಲ್ಲೇ ಸಾವು!

0
19

ರಸಗುಲ್ಲಾ ಎಂದು ಭಾವಿಸಿ ವ್ಯಕ್ತಿಯೊಬ್ಬರು ಬಾಂಬ್‌ ಅನ್ನು ಬಾಯಿಗೆ ಹಾಕಿಕೊಂಡ ಪರಿಣಾಮ ಸ್ಫೋಟಗೊಂಡು ಮೃತಪಟ್ಟ ಘಟಣೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಸಂಭವಿಸಿದೆ.

ನವೆಂಬರ್ 10ರ ತಡರಾತ್ರಿ ಪದಾರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ರಾಜೇಂದ್ರ ಬರೋಟಿಯಾ ಎಂದು ಗುರುತಿಸಲಾಗಿದೆ. ಅವರು ಮನೆಯಲ್ಲಿದ್ದ ವೇಳೆ ರಾಮ್ ಭಗತ್ ಬರೋಟಿಯಾ ಎಂಬಾತ ಅಲ್ಲಿಗೆ ಬಂದಿದ್ದು, ತನ್ನ ಕೈಯಲ್ಲಿದ್ದ ಬಿಳಿ ಬಣ್ಣದ ದುಂಡನೆಯ ವಸ್ತುವನ್ನು ರಾಜೇಂದ್ರ ಅವರಿಗೆ ನೀಡಿ ಅದು ರಸಗುಲ್ಲಾ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಇದನ್ನು ಸಿಹಿತಿಂಡಿ ಎಂದು ಭಾವಿಸಿದ ರಾಜೇಂದ್ರ ಬಾಯಿಗೆ ಹಾಕಿಕೊಂಡು ಕಚ್ಚಿದ್ದಾರೆ. ಆದರೆ ಅದು ರಸಗುಲ್ಲಾ ಆಗಿರದೆ, ದೇಶೀಯವಾಗಿ ತಯಾರಿಸಲಾದ ಸ್ಫೋಟಕವಾಗಿತ್ತು. ಬಾಯಿಗೆ ಹಾಕಿಕೊಂಡ ಕೆಲವೇ ಕ್ಷಣಗಳಲ್ಲಿ ಅದು ಸ್ಫೋಟಗೊಂಡಿದ್ದು, ತೀವ್ರ ಗಾಯಗೊಂಡ ರಾಜೇಂದ್ರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸ್ಫೋಟದ ಶಬ್ದ ಕೇಳುತ್ತಿದ್ದಂತೆ ರಾಜೇಂದ್ರ ಅವರ ಪತ್ನಿ ಸುಶೀಲಾ ಬಾಯಿ ಕೋಣೆಯಿಂದ ಹೊರಬಂದು ನೋಡಿದಾಗ ಪತಿ ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ. ತಕ್ಷಣ ನೆರೆಹೊರೆಯವರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಗಿದೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ರಾಮ್ ಭಗತ್ ಬರೋಟಿಯಾ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ರಾಮ್ ಭಗತ್ ತನಗೆ ಓರ್ವ ಹುಡುಗ ಬಾಂಬ್ ನೀಡಿದ್ದ ಎಂದು ಹೇಳಿದ್ದಾನೆ. ಆ ಹುಡುಗನನ್ನೂ ಪೊಲೀಸರು ಬಂಧಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಈ ಬಾಂಬ್‌ಗಳನ್ನು ಪ್ರಾಣಿಗಳನ್ನು ಕೊಲ್ಲಲು ಬಳಸಲಾಗುತ್ತಿತ್ತು ಎನ್ನಲಾಗಿದೆ. ರಾಜೇಂದ್ರ ಅವರಿಗೆ ಉದ್ದೇಶಪೂರ್ವಕವಾಗಿ ಸ್ಫೋಟಕ ನೀಡಲಾಗಿತ್ತೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.