ಸಂಕಷ್ಟದ ಬದುಕಿಗೆ ಮಾನವೀಯ ಸ್ಪರ್ಶ ಸ್ಪರ್ಶ ನೀಡುವುದೇ ಗುರುತತ್ತ್ವದ ನಿಜವಾದ ಅನುಷ್ಠಾನ. : ಡಾ. ತ್ರಿವೇಣಿ ರಮೇಶ್

0
4

ಮಾಣಿ : “ಸಂಕಷ್ಟದಲ್ಲಿರುವವರ ಬದುಕಿಗೆ ಮಾನವೀಯ ಸ್ಪರ್ಶ ನೀಡುವುದೇ ಗುರುತತ್ತ್ವದ ನಿಜವಾದ ಅನುಷ್ಠಾನ. ನಾರಾಯಣ ಗುರುಗಳ ತತ್ವಗಳು ಸಮಾಜದ ಅಂಚಿನಲ್ಲಿರುವವರ ಬದುಕಿಗೆ ಸ್ಪಂದಿಸುವ ಮೂಲಕ ಅರ್ಥಪೂರ್ಣವಾಗುತ್ತವೆ. ಸಂಕಷ್ಟದಲ್ಲಿರುವವರೊಂದಿಗೆ ನಿಂತು ಅವರಿಗೆ ಆತ್ಮಸ್ಥೈರ್ಯ ನೀಡುವುದು ಗುರುತತ್ತ್ವದ ನೈಜ ಅನುಷ್ಠಾನವಾಗಿದೆ” ಎಂದು ಯುವವಾಹಿನಿ (ರಿ.) ಮಾಣಿ ಘಟಕದ ಕೋಶಾಧಿಕಾರಿ ಡಾ. ತ್ರಿವೇಣಿ ರಮೇಶ್ ಹೇಳಿದರು.

ಅವರು ಸೆಪ್ಟಂಬರ್ 22 ಮಂಗಳವಾರ ಯುವವಾಹಿನಿ (ರಿ.) ಮಾಣಿ ಘಟಕದ “ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮದ ಅಂಗವಾಗಿ ಮಾಣಿ ಗ್ರಾಮದ ಕೊಡಾಜೆ ಕೋಚಪಳಿಕೆ ಕುಮಾರಿ ಲಲಿತಾ ಅವರ ಮನೆಯಲ್ಲಿ ನಡೆದ ಭಜನಾ ಸಂಕೀರ್ತನೆ ಹಾಗೂ ನಾರಾಯಣ ಗುರುಗಳ ತತ್ವಸಂದೇಶವನ್ನು ಕಾರ್ಯಕ್ರಮದಲ್ಲಿ ಮಾತನಾಡಿದರು

ತಂದೆ-ತಾಯಿಯ ಆಶ್ರಯವಿಲ್ಲದೆ ಸಂಕಷ್ಟದ ಬದುಕು ಸಾಗಿಸುತ್ತಿರುವ ಮಹಿಳೆಯೊಬ್ಬರು, ಅನಾರೋಗ್ಯ ಹಾಗೂ ಅಂಗವೈಕಲ್ಯದಿಂದ ಬಳಲುತ್ತಿರುವ ಕುಟುಂಬ ಸದಸ್ಯರ ಜವಾಬ್ದಾರಿಯೊಂದಿಗೆ ನಾಲ್ವರು ಅಕ್ಕ-ತಂಗಿಯರನ್ನು ನೋಡಿಕೊಳ್ಳುತ್ತಿರುವ ಪರಿಸ್ಥಿತಿಯನ್ನು ಮನಗಂಡು ಯುವವಾಹಿನಿಯ ಸದಸ್ಯರು ಮಾನವೀಯವಾಗಿ ಸ್ಪಂದಿಸಿದರು.
ಕುಟುಂಬದ ಕಷ್ಟಕರ ಪರಿಸ್ಥಿತಿಯನ್ನು ಕಂಡ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ಅವರು, “ಇಂತಹ ಸಂದರ್ಭದಲ್ಲಿ ಕೇವಲ ಕಾರ್ಯಕ್ರಮ ನಡೆಸುವುದಕ್ಕಿಂತ ಕುಟುಂಬದವರೊಂದಿಗೆ ಆತ್ಮೀಯವಾಗಿ ಬೆರೆತು ಅವರಿಗೆ ಧೈರ್ಯ ತುಂಬುವುದು ಅಗತ್ಯ” ಎಂಬ ನಿರ್ಧಾರ ಕೈಗೊಂಡರು. ಅವರ ಮುಂದಾಳತ್ವದಲ್ಲಿ ಸದಸ್ಯರು ಸ್ವಯಂಪ್ರೇರಿತವಾಗಿ ಈ ಮನೆಗೆ ತೆರಳಿ ಭಜನಾ ಸಂಕೀರ್ತನೆ ಹಾಗೂ ಗುರುತತ್ತ್ವದ ಸಂದೇಶವನ್ನು ಹಂಚಿಕೊಳ್ಳುವುದರ ಜೊತೆಗೆ, ಗುರುಪೂಜೆಗೆ ಸಂಬಂಧಿಸಿದ ಹಣ್ಣು-ಹಂಪಲು, ಹೂವು, ಪಂಚಕಜ್ಜಾಯ ಸೇರಿದಂತೆ ಅಗತ್ಯ ಪೂಜಾ ಸಾಮಗ್ರಿಗಳನ್ನು ಸ್ವತಃ ವ್ಯವಸ್ಥೆ ಮಾಡಿಕೊಂಡು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ರಮೇಶ್ ಪೂಜಾರಿ ಮುಜಲ, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ಶ್ರೀಧರ ಪೂಜಾರಿ ಮುಜಲ ಹಾಗೂ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಜನಾರ್ದನ ಪೂಜಾರಿ ಕೊಡಂಗೆ ಯಶೋಧರ, ಬಾಲಕೃಷ್ಣ ಶೇರ, ಸುಜಿತ್ ಬಾಕಿಲ ಹಾಗೂ ಸಚಿನ್ ಅಮೀನ್ ಪೆರಾಜೆ ಘಟಕದ ನಿರ್ದೇಶಕರು, ಸದಸ್ಯರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಟುಂಬದೊಂದಿಗೆ ಆತ್ಮೀಯವಾಗಿ ಬೆರೆತರು.

ಸಂಕಷ್ಟದಲ್ಲಿರುವ ಕುಟುಂಬದೊಂದಿಗೆ ನಿಂತು, ನಾರಾಯಣ ಗುರುಗಳ ತತ್ವವನ್ನು ಕೇವಲ ಮಾತಿನಲ್ಲಿ ಸೀಮಿತಗೊಳಿಸದೆ, ಮಾನವೀಯ ಕಾಳಜಿ ಹಾಗೂ ಸೇವೆಯ ಮೂಲಕ ಅಳವಡಿಸಿಕೊಂಡ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.