ಉಡುಪಿ : ಕೆಜಿ ರೋಡ್–ಪೆರಡೂರು ರಸ್ತೆಯ ಬದಿಯಲ್ಲಿ ಹಾವಂಜೆ ಹಾಗೂ ಕುಕ್ಕೆಹಳ್ಳಿ ವ್ಯಾಪ್ತಿಯಲ್ಲಿರುವ ಮೂರು ಬಸ್ ನಿಲ್ದಾಣಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ಅಪಾಯಕಾರಿ ಬಸ್ ನಿಲ್ದಾಣಗಳನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಆಗ್ರಹಿಸಿದ್ದಾರೆ.
ಹಾವಂಜೆಯ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ಕುಕ್ಕೆಹಳ್ಳಿ ಜಂಕ್ಷನ್‌ನ ರಿಕ್ಷಾ ನಿಲ್ದಾಣದ ಸಮೀಪ ಇರುವ ಈ ಬಸ್ ನಿಲ್ದಾಣಗಳನ್ನು ಪ್ರತಿದಿನ ನೂರಾರು ಮಂದಿ ಅವಲಂಬಿಸಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಸಾರ್ವಜನಿಕರು ಬಸ್‌ಗಾಗಿ ಕಾಯಲು ಈ ನಿಲ್ದಾಣಗಳನ್ನು ಬಳಸುತ್ತಿದ್ದಾರೆ.
ಆದರೆ ಮೂರು ಬಸ್ ನಿಲ್ದಾಣಗಳೂ ಸದ್ಯ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಅವುಗಳೊಳಗೆ ನಿಲ್ಲಲು ಪ್ರಯಾಣಿಕರು ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಜಿ ರೋಡ್ ಹಾಗೂ ಪೆರಡೂರು ರಸ್ತೆಯ ಬದಿಯಲ್ಲಿರುವುದರಿಂದ ವಾಹನಗಳ ಸಂಚಾರದ ನಡುವೆಯೇ ಪ್ರಯಾಣಿಕರು ಬಸ್‌ಗಾಗಿ ಕಾಯಬೇಕಾಗಿದೆ. ಇದರಿಂದ ಅಪಾಯ ಮತ್ತಷ್ಟು ಹೆಚ್ಚಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಹಂಚು ಚಾವಣಿಯ ಎರಡು ನಿಲ್ದಾಣಗಳು ಶಿಥಿಲ
ಹಾವಂಜೆ ಹಾಗೂ ಕುಕ್ಕೆಹಳ್ಳಿ ಭಾಗದಲ್ಲಿರುವ ಎರಡು ಬಸ್ ನಿಲ್ದಾಣಗಳು ಹಂಚು ಚಾವಣಿಯನ್ನು ಹೊಂದಿದ್ದು, ಚಾವಣಿ ಸೇರಿದಂತೆ ಕಟ್ಟಡದ ವಿವಿಧ ಭಾಗಗಳು ಶಿಥಿಲಗೊಂಡಿವೆ. ಯಾವುದೇ ಸಂದರ್ಭದಲ್ಲಿ ಚಾವಣಿ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ಭಯದಲ್ಲೇ ಬಸ್‌ಗಾಗಿ ಕಾಯುವಂತಾಗಿದೆ.
ಇನ್ನೊಂದು ಬಸ್ ನಿಲ್ದಾಣವು ಹಾವಂಜೆಯ ಸ್ನೇಹ ಸ್ಪೋರ್ಟ್ಸ್ ಕ್ಲಬ್‌ನ ಹಿಂಭಾಗ ಹಾಗೂ ರಿಕ್ಷಾ ನಿಲ್ದಾಣದ ಎದುರುಗಡೆ ಇದ್ದು, ಹಲವು ವರ್ಷಗಳ ಹಿಂದಿನ ಕಾಂಕ್ರೀಟ್ ಸ್ಲ್ಯಾಬ್‌ನಿಂದ ನಿರ್ಮಿಸಲಾಗಿದೆ. ಈ ಕಟ್ಟಡದ ಸಿಮೆಂಟ್ ಕಳಚಿಹೋಗಿದ್ದು, ಒಳಭಾಗದಲ್ಲಿರುವ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ. ಕಟ್ಟಡದ ಸ್ಥಿತಿ ಅಪಾಯಕಾರಿಯಾಗಿರುವುದರಿಂದ ತಕ್ಷಣ ದುರಸ್ತಿ ಅಥವಾ ತೆರವುಗೊಳಿಸುವ ಅಗತ್ಯವಿದೆ ಎಂದು ಸತೀಶ್ ಪೂಜಾರಿ ತಿಳಿಸಿದ್ದಾರೆ.
ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹ
ರಾಜ್ಯದ ವಿವಿಧೆಡೆ ಶಿಥಿಲಗೊಂಡ ಬಸ್ ನಿಲ್ದಾಣಗಳು ಕುಸಿದು ಅಪಘಾತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ, ಇಂತಹ ಘಟನೆಗಳು ನಡೆಯುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಹಾವಂಜೆ ಹಾಗೂ ಕುಕ್ಕೆಹಳ್ಳಿ ವ್ಯಾಪ್ತಿಯ ಮೂರು ಅಪಾಯಕಾರಿ ಬಸ್ ನಿಲ್ದಾಣಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ತೆರವುಗೊಳಿಸಿ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಸುಸಜ್ಜಿತ ಹೊಸ ಬಸ್ ನಿಲ್ದಾಣಗಳನ್ನು ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ನಿತ್ಯ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಒತ್ತಾಯಿಸಿದ್ದಾರೆ.

