ಉಡುಪಿ : ದುಬೈನಲ್ಲಿ ಉಡುಪಿ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರ್ಜಾ ಫೊರೆನ್ಸಿಕ್ ವರದಿಯಲ್ಲಿ ಹಲವು ಬೆಚ್ಚಿಬೀಳಿಸುವ ಅಂಶಗಳು ಬಹಿರಂಗವಾಗಿವೆ. ಮೃತದೇಹವನ್ನು ಒಂಭತ್ತು ಭಾಗಗಳಾಗಿ ಬೇರ್ಪಡಿಸಿ ಎರಡು ಚೀಲಗಳಲ್ಲಿ ತುಂಬಿ ಕಾರಿನ ಡಿಕ್ಕಿಯಲ್ಲಿ ಇರಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿ ಪ್ರಕಾರ, ದೇಹದ ಭಾಗಗಳನ್ನು ಅಲ್ ನಹ್ದಾ ಕಮರ್ಷಿಯಲ್ ಏರಿಯಾ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಡಿಕ್ಕಿಯಲ್ಲಿ ಇರಿಸಲಾಗಿತ್ತು. ಒಂದು ಹಸಿರು ಚೀಲದಲ್ಲಿ ದೇಹದ ಮಧ್ಯಭಾಗ ಹಾಗೂ ಮುಂಡದ ಭಾಗವಿದ್ದರೆ, ಮತ್ತೊಂದು ನೀಲಿ ಚೀಲದಲ್ಲಿ ತಲೆ ಮತ್ತು ಕೈಕಾಲುಗಳ ಭಾಗಗಳು ಪತ್ತೆಯಾಗಿದ್ದವು. ತಲೆಯನ್ನು ಕಪ್ಪು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಲಾಗಿತ್ತು ಎಂದು ತಿಳಿದುಬಂದಿದೆ.
ಮೃತದೇಹದ ಪರೀಕ್ಷೆಯಲ್ಲಿ ಎಡ ಎದೆ ಭಾಗದಲ್ಲಿ ಎರಡು ಗಾಯಗಳು ಪತ್ತೆಯಾಗಿದ್ದು, ಎಡ ಎದೆಗೂಡಿನೊಳಗೆ ರಕ್ತಸ್ರಾವವಾಗಿರುವುದು ಫೊರೆನ್ಸಿಕ್ ಪರೀಕ್ಷೆಯಲ್ಲಿ ಕಂಡುಬಂದಿದೆ. ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಆಂತರಿಕ ಅಂಗಾಂಗಗಳು ಅತ್ಯಂತ ಮೃದುವಾದ ಸ್ಥಿತಿಯಲ್ಲಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಕ್ತದ ಮಾದರಿಯಲ್ಲಿ 25.77 ಮಿ.ಗ್ರಾಂ/ಡೆಸಿ.ಲೀ. ಪ್ರಮಾಣದ ಆಲ್ಕೋಹಾಲ್ ಪತ್ತೆಯಾಗಿದೆ.
ಗರಗಸ ಬಳಸಿ ಎಲುಬು ಬೇರ್ಪಡಿಸಿರುವುದು ಪತ್ತೆ
ಫೊರೆನ್ಸಿಕ್ ಪರೀಕ್ಷೆಯ ಪ್ರಕಾರ ಮೃತದೇಹವನ್ನು ವಿವಿಧ ಭಾಗಗಳಾಗಿ ಬೇರ್ಪಡಿಸುವ ವೇಳೆ ಎಲುಬುಗಳನ್ನು ಗರಗಸದಿಂದ ಕತ್ತರಿಸಿರುವ ಗುರುತುಗಳು ಕಂಡುಬಂದಿವೆ. ದೇಹದ ಮೃದು ಅಂಗಾಂಶಗಳನ್ನು ಕತ್ತರಿಸುವ ಮೂಲಕ ಬೇರ್ಪಡಿಸಲಾಗಿದ್ದು, ಸಂಧಿಗಳ ಸುತ್ತಲಿನ ಮೃದು ಅಂಗಾಂಶಗಳನ್ನು ಕತ್ತರಿಸಿ ಬಳಿಕ ಎಲುಬುಗಳನ್ನು ಬೇರ್ಪಡಿಸಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.
ಮೃತದೇಹದ ತಲೆ ಮತ್ತು ಕುತ್ತಿಗೆಯ ಭಾಗವನ್ನು ಬೇರ್ಪಡಿಸಲಾಗಿತ್ತು. ಕೆಳಭಾಗದ ಕುತ್ತಿಗೆ, ಎದೆ ಹಾಗೂ ಹೊಟ್ಟೆಯ ಭಾಗಗಳನ್ನು ಪ್ರತ್ಯೇಕಿಸಲಾಗಿತ್ತು. ಭುಜಗಳನ್ನೂ ಬೇರ್ಪಡಿಸಲಾಗಿದ್ದು, ಎರಡೂ ಕೈಗಳನ್ನು ಪ್ರತ್ಯೇಕಿಸಲಾಗಿತ್ತು. ಕಾಲುಗಳನ್ನು ಸೊಂಟ ಹಾಗೂ ಮೊಣಕಾಲಿನ ಸಂಧಿಗಳ ಬಳಿ ಬೇರ್ಪಡಿಸಲಾಗಿತ್ತು ಎಂದು ಫೊರೆನ್ಸಿಕ್ ವರದಿ ತಿಳಿಸಿದೆ.
ಈ ಪ್ರಕರಣದಲ್ಲಿ ಪ್ರಕಾಶ್ ಕುಂದರ್ ಅವರ ಹತ್ಯೆಯ ಬಳಿಕ ಮೃತದೇಹವನ್ನು ವಿಲೇವಾರಿ ಮಾಡಲು ನಡೆಸಿದ ಪ್ರಯತ್ನಗಳ ಕುರಿತು ತನಿಖಾ ಸಂಸ್ಥೆಗಳು ಮುಂದಿನ ಪರಿಶೀಲನೆ ನಡೆಸುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಚಲನವಲನ, ಭಾರತಕ್ಕೆ ಬಂದಿರುವ ಕುಟುಂಬ ಸದಸ್ಯರ ಮಾಹಿತಿ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಫೊರೆನ್ಸಿಕ್ ವರದಿಯಲ್ಲಿನ ಅಂಶಗಳು ಪ್ರಕರಣದ ತನಿಖೆಗೆ ಪ್ರಮುಖ ಸಾಕ್ಷ್ಯವಾಗುವ ಸಾಧ್ಯತೆಯಿದ್ದು, ಹತ್ಯೆಯ ನಿಖರ ಕಾರಣ, ಘಟನೆಯ ಹಿಂದಿರುವ ವ್ಯಕ್ತಿಗಳು ಹಾಗೂ ಮೃತದೇಹವನ್ನು ವಿಲೇವಾರಿ ಮಾಡಿದ ರೀತಿಯ ಕುರಿತು ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

