
ಮೂಡುಬಿದಿರಿ : ಪುತ್ತೂರಿನ ಸೈoಟ್ ಫಿಲೋಮಿನಾ ಕಾಲೇಜಿನ ಪಿ. ಜಿ ವಿಭಾಗದ ಸಭಾoಗಣದಲ್ಲಿ ತೆಂಕು ತಿಟ್ಟಿನ ಖ್ಯಾತ ಭಾಗವತ ಬಲಿಪ ಪ್ರಸಾದ ಭಾಗವತ 50ರ ನೆನಪು,ಪಂಚಾಶತ್ ಸ್ಮರಣ್, ಪಂಚಾಶತ್ ಸಮ್ಮಾನಸರಣಿಯ 14 ನೇಯ ಕಾರ್ಯಕ್ರಮ ಸೆ. 23 ರಂದು ಜರುಗಿತು.
ಕಾಲೇಜಿನ ಉಪ ಪ್ರಾಶುoಪಾಲರಾದ ಡಾ. ವಿಜಯಕುಮಾರ್ ಮೊಳೆಯಾರರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಬಲಿಪ ಪ್ರಸಾದರೊಂದಿಗೆ 14 ವರ್ಷಗಳ ಕಾಲ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದ್ದ ಹಾಗೂ 38 ವರ್ಷಗಳ ತಿರುಗಾಟದ ಅನುಭವವಿರುವ ತಾಳಮದ್ದಳೆ ಅರ್ಥದಾರಿಯೂ ಆದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರನ್ನು ಬಲಿಪ. ಪ್ರಸಾದರ ಹೆಸರು ಮುದ್ರಿತ ಶಾಲು ಹೊದಿಸಿ, ಶಾಲು ಹಾಕಿ ಫಲ ಪುಷ್ಪ, ಸ್ಮರಣಿಕೆ ಮತ್ತು ಸನ್ಮಾನ ಪತ್ರಗಳನಿತ್ತು ಸಮ್ಮಾನಿಸಿ ಗೌರವಿಸಲಾಯ್ತು.ಸಂಘಟಕ ಕೃಷ್ಣ ಕುಮಾರ್ ತಂಡದ ಮೂಡುಬಿದಿರಿಯ ಸದಸ್ಯರು ಪುತ್ತೂರಿಗೆ ತೆರಳಿ ಅಲ್ಲಿ ಸನ್ಮಾನ ನೆರವೇರಿಸಿದ್ದು ವಿಶೇಷ.
ಮೂಡುಬಿದಿರಿಯ ಯಕ್ಷಸಂಗಮದ ಸಂಚಾಲಕ, ಸಂಘಟಕ ಎಂ ಶಾಂತರಾಮ ಕುಡ್ವ ಅವರು ಬಲಿಪ ಪ್ರಸಾದ ಸಂಸ್ಮರಣೆ ಮತ್ತು ಪೆರ್ಮುದೆಯವರ ಅಭಿನಂದನಾ ಭಾಷಣ ಮಾಡಿ ಬಹಳ ವರ್ಷಗಳ ಕಾಲ ಕಟೀಲು ಮೇಳದಲ್ಲಿ ಬಲಿಪ ಪ್ರಸಾದರೊಂದಿಗಿದ್ದು ಸಹೋದರರಂತೆ ಸುಖ ಕಷ್ಟಗಳಲ್ಲಿ ಜೊತೆಗಿದ್ದು ಮೇಳದ ಅಭಿವೃದ್ಧಿಯಲ್ಲಿ ಕೂಡ ಅಪಾರ ಕೊಡುಗೆ ನೀಡಿದ ಬಲಿಪ ಪ್ರಸಾದ ಮತ್ತು ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರ ಕೊಡುಗೆಗಳನ್ನು ಕುಡ್ವರು ಸ್ಮರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಯಪ್ರಕಾಶ್ ಶೆಟ್ಟಿಯವರು ಕಲೆಗಾಗಿಯೇ ಬದುಕುವ ತನ್ನಂತಹ ನೂರಾರು ಕಲಾವಿದರ ಸೇವೆಯನ್ನು ಸ್ಮರಿಸಿ ಈಗಾಗಲೇ ನೂರಕ್ಕೂ ಹೆಚ್ಚಿನ ಕಲಾವಿದರುಗಳನ್ನು ಗೌರವಿಸಿ ಸನ್ಮಾನಿಸಿರುವ ಸಂಘಟಕ ಕೃಷ್ಣ ಕುಮಾರ್ ರವರ ನಡೆಯನ್ನು ಅವರು ಶ್ಲಾಘಿಸಿದರು, ಮೇಳದಲ್ಲಿನ ಬಲಿಪ ಪ್ರಸಾದರೊಂದಿಗಿನ ಒಡನಾಟವನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
ಪಂಚಾಶತ್ ಸನ್ಮಾನ ಸರಣಿಯ ಬಳಗದ ಗೌರವ ಸಲಹೆಗರರಾದ ಅಳಿಯೂರು ರುಕ್ಕಯ್ಯ ಪೂಜಾರಿಯವರು ನಿಗದಿಯಾಗಿರುವ ಸರಣಿಯ ಮುಂದಿನ ಕಾರ್ಯಕ್ರಮಗಳ ವಿವರ ನೀಡಿದರು.ಮೂಡುಬಿದಿರಿಯ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ರಿಚರ್ಡ್ ಕರ್ಡೊಜ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಲಯನ್ ಅಲ್ವಿನ್ ಮಿನೇಜೆಸ್ ಗಂಟಲ್ಕಟ್ಟೆ ಸನ್ಮಾನ ಪತ್ರ ವಾಚಿಸಿದರು.ಸರಣಿ ಸನ್ಮಾನ ಕಾರ್ಯಕ್ರಮದ ಸಂಘಟಕ ಕ್ರಷ್ಣ ಕುಮಾರ್ ರವರು ಪ್ರಾಸ್ಥಾವಿಕವಾಗಿ ಮಾತನಾಡಿದರು.ಕಾಲೇಜಿನ ಪರ್ಫಾರ್ಮಿoಗ್ ಆಸೋಸಿಯೇಷನ್ ಸಂಯೋಜಕ ಪ್ರೊ. ಪ್ರಶಾಂತ ರೈಯವರು ಪ್ರಾರಂಭದಲ್ಲಿ. ಸ್ವಾಗತಿಸಿದರು.
ಹಿರಿಯ ಯಕ್ಷಗುರು ಅನಂತ ಪದ್ಮನಾಭ ಹೊಳ್ಳ, ವಾಸ್ತು ಮತ್ತು ಸಂಖ್ಯಾ ಶಾಸ್ತ್ರ ತಜ್ಞರಾದ ಮಾರೂರು ರಾಘವೇಂದ್ರ ಭಂಡಾರ್ಕಾರ್, ಪತ್ರಕರ್ತೆ ಪ್ರೇಮಾ ಶ್ರೀ ಕಲ್ಲಬೆಟ್ಟು ಅತಿಥಿಗಳನ್ನು ಗೌರವಿಸಿಸಿದರು.ಕಾಲೇಜಿನ ರಿಜಿಸ್ಟ್ರಾರ್ ರುಗಳಾದ ಡಾ.ನಾರ್ಬರ್ಟ್ ಮಾಸ್ಕರೇನಸ್ ,ಮತ್ತು ಡಾ. ವಿನಾಯಚಂದ್ರ, ಡೀನ್ ಡಾ. ರಾಧಾಕೃಷ್ಣ ಗೌಡ, ಉಪನ್ಯಾಸಕ ಪ್ರೊ.ಸಂತೋಷ್ ಶೆಟ್ಟಿ ನಿವೃತ್ತ ಪೊಲೀಸ್ ಅಧಿಕಾರಿ ವಾಸು ನಾಯ್ಕ, ಸಂಸ್ಕೃತ ಅಧ್ಯಾಪಕ ವೆಂಕಟೇಶ್ ಭಟ್ ಮತಿತ್ತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಪೂಜಾ ವಿ ರೈ ಯವರು ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮಕ್ಕೂ ಮೊದಲು ಪ್ರೊ. ಪ್ರಶಾಂತ್ ರೈಯವರ ಭಾಗವತಿಕೆಯಲ್ಲಿ ಗುರು ದಕ್ಷಿಣಾ ತಾಳಮದ್ದಳೆ ನೆರವೇರಿತು. ಏಕಲವ್ಯನಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಮತ್ತು ದ್ರೋಣನಾಗಿ ವೆಂಕಟೇಶ್ ಭಟ್ ತಮ್ಮ ಪಾತ್ರದಲ್ಲಿ ವಿಜೃಂಭಿಸಿದರು.
