ಮೀನಿನಿಂದ ಬಿಡುಗಡೆಯಾದ ವಿಷಕಾರಿ ಅನಿಲ ಸೇವಿಸಿ ಐವರು ಮೀನುಗಾರರು ಮೃತಪಟ್ಟ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲೆಯ ವಿವಿಧ ಮೀನುಗಾರಿಕಾ ಬಂದರುಗಳಲ್ಲಿ ವಿಶೇಷ ಜಾಗೃತಿ ಸಭೆಗಳನ್ನು ಮಾಡಲಾಗಿದೆ. ಮೀನುಗಾರರ ಜೀವ ರಕ್ಷಣೆಗೆ ಮೀನುಗಾರಿಕೆ ಇಲಾಖೆ, ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಈ ಘಟಣೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಮೀನುಗಾರರು ಚಮನ್ ಮೀನು ಹಿಡಿದ ಕೂಡಲೇ ಶೀತಲೀಕರಣ ಮಾಡಬೇಕು. ಬಂದರಿಗೆ ಮೀನುಗಳನ್ನು ಶೀಘ್ರವಾಗಿ ಸಾಗಿಸಬೇಕು. ಕೊಳೆತ ಮೀನು, ತ್ಯಾಜ್ಯಗಳನ್ನು ಬೋಟ್ಗಳಲ್ಲಿ ಸಂಗ್ರಹ ಮಾಡಬಾರದು. ಯಾವುದೇ ಕಾರಣಕ್ಕೂ ಮೀನು ಸಂಗ್ರಹಣಾ ಟ್ಯಾಂಕ್ಗಳ ಒಳಗೆ ನೇರವಾಗಿ ಇಳಿಯಬಾರದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಗ್ಯಾಸ್ ಡಿಟೆಕ್ಟರ್ ಮೂಲಕ ವಿಷಕಾರಿ ಅನಿಲ ಟ್ಯಾಂಕ್ನೊಳಗೆ ಇದೆಯೇ ಎನ್ನುವುದನ್ನು ಪರೀಕ್ಷೆ ಮಾಡಬೇಕು. ಗಾಳಿ ಸಂಚಾರ ಒಳ್ಳೆಯದಿರಬೇಕು. ವಾಸನೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಸ್ಥಳ ಸುರಕ್ಷಿತ ಎಂದು ಭಾವಿಸಬಾರದು. ಉಸಿರಾಟದ ಸುರಕ್ಷತಾ ಸಾಧನಗಳಿಲ್ಲದೆ ಯಾರೂ ಒಳಗೆ ಪ್ರವೇಶ ಮಾಡಬಾರದು ಎಂದು ಸೂಚಿಸಲಾಗಿದೆ.

