ಬಂಟ್ವಾಳ : ತಲವಾರು ಹಾಗೂ ಕಬ್ಬಿಣದ ರಾಡ್ನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆ ನಿವಾಸಿ ಪ್ರಶಾಂತ್ ಬೆಳ್ಳಾಡ್ (41) ಅವರು ಸೆ.20ರಂದು ಸಂಜೆ ಕಮ್ಮಾಜೆಯಲ್ಲಿ ಇದ್ದ ವೇಳೆ, ಆಟೋರಿಕ್ಷಾದಲ್ಲಿ ಬಂದ ಪರಿಚಯದವರಾದ ಅಮ್ಮುಂಜೆ ನಿವಾಸಿ ಪ್ರಶಾಂತ್ (38), ತೆಂಕಬೆಳ್ಳೂರು ನಿವಾಸಿ ರಾಮದಾಸ್ (43) ಹಾಗೂ ಬಡಗಬೆಳ್ಳೂರು ನಿವಾಸಿ ಶಂಕರ (45) ಎಂಬವರು ತಲವಾರು ಹಾಗೂ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ಪ್ರಶಾಂತ್ ಬೆಳ್ಳಾಡ್ ಅವರಿಗೆ ಗಂಭೀರ ರಕ್ತಗಾಯವಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹಲ್ಲೆಯ ಬಳಿಕ ಪರಿಚಯದವರು ಸ್ಥಳಕ್ಕೆ ಬರುತ್ತಿರುವುದನ್ನು ಕಂಡ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು ಎನ್ನಲಾಗಿದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

