ಕಾರ್ಕಳ : ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ವೈದ್ಯರಿಗೆ ಜೀವ ಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವ ಅಶೋಕ್ ಎಂಬ ವ್ಯಕ್ತಿಯ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಆಗ್ರಹಿಸಿದ್ದಾರೆ.
ಘಟನೆ ನಡೆದಿದ್ದು ಐದು ದಿನಗಳಾದರೂ, ವೈದ್ಯರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಆರೋಪಿತ ವ್ಯಕ್ತಿಯ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ OPD ವಿಭಾಗಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದ್ದ ಸಂದರ್ಭದಲ್ಲಿ ಆರೋಪಿತ ವ್ಯಕ್ತಿ ಅಕ್ರಮವಾಗಿ ಪ್ರವೇಶಿಸಿ, ಸ್ತ್ರೀರೋಗ ತಜ್ಞ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೆ, ಪರಿಸ್ಥಿತಿ ಉದ್ವಿಗ್ನಗೊಳ್ಳುವಂತೆ ಮಾಡಿದ್ದಾನೆ ಎಂದು ರಮಿತಾ ಸೂರ್ಯವಂಶಿ ಆರೋಪಿಸಿದ್ದಾರೆ.
‘ವೈದ್ಯೋ ನಾರಾಯಣೋ ಹರಿಃ’ ಎಂಬ ಮಾತಿನಂತೆ ವೈದ್ಯರು ಸಮಾಜದ ಆರೋಗ್ಯ ಕಾಪಾಡುವ ಮಹತ್ವದ ಸೇವೆಯಲ್ಲಿ ತೊಡಗಿದ್ದಾರೆ. ಅಂತಹ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪೊಲೀಸ್ ಇಲಾಖೆ ದೂರು ಪುನರ್ ಪರಿಶೀಲಿಸಿ, ಆರೋಪಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಸರ್ಕಾರಿ ಆಸ್ಪತ್ರೆಯ ಗೌರವ ಹಾಗೂ ವೈದ್ಯರ ಸುರಕ್ಷತೆಯನ್ನು ಕಾಪಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮುಂದಿನ ದಿನಗಳಲ್ಲಿ ಆರೋಪಿತನ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮಹಿಳಾ ಆಯೋಗದ ಮೆಟ್ಟಿಲೇರುವುದಾಗಿ ರಮಿತಾ ಸೂರ್ಯವಂಶಿ ಅವರು ಪತ್ರಿಕಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

