ಬೆಂಗಳೂರು : ಕನ್ನಡ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಖ್ಯಾತ ಡ್ರಮ್ಮರ್ ದೇವ ಅವರು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಗ್ಯಾಂಗ್ರಿನ್‌ನಿಂದಾಗಿ ಒಂದು ಕಾಲನ್ನು ಕಳೆದುಕೊಂಡಿದ್ದರು. ಬೆಂಗಳೂರಿನ ಆರ್.ಆರ್. ನಗರದ ನಿವಾಸದಲ್ಲಿ (ಸೆ27) ಇಂದು 64ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
‘ಕನ್ನಡದ ಶಿವಮಣಿ’ ಎಂದೇ ಖ್ಯಾತಿ
ಆರಂಭದಲ್ಲಿ ಡ್ರಮ್ ಒರೆಸುವ ಕೆಲಸ ಮಾಡುತ್ತಿದ್ದ ದೇವ ಅವರು ಕಠಿಣ ಪರಿಶ್ರಮ, ಸಂಗೀತದ ಮೇಲಿನ ಅಪಾರ ಪ್ರೀತಿ ಹಾಗೂ ತಮ್ಮ ಪ್ರತಿಭೆಯ ಮೂಲಕ ಕನ್ನಡ ಚಿತ್ರರಂಗದ ಪ್ರಮುಖ ಡ್ರಮ್ಮರ್ ಆಗಿ ಗುರುತಿಸಿಕೊಂಡಿದ್ದರು. ‘ಕನ್ನಡದ ಶಿವಮಣಿ’ ಎಂದೇ ಜನಪ್ರಿಯರಾಗಿದ್ದ ಅವರು ಸಂಗೀತ ದಿಗ್ಗಜ ಇಳಯರಾಜ ಸೇರಿದಂತೆ ಹಲವು ಪ್ರಮುಖ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದರು.
ಹಲವು ಚಿತ್ರಗಳಿಗೆ ಸಂಗೀತ
ಡ್ರಮ್ಮರ್ ದೇವ ಅವರು ಕನ್ನಡದ ‘5 ಈಡಿಯಟ್ಸ್’ ಹಾಗೂ ‘ಪ್ರೀತಿ ನೀ ಹೀಂಗ್ಯಾಕೆ’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದರು. ಹಂಸಲೇಖ, ಸಾಧು ಕೋಕಿಲ ಸೇರಿದಂತೆ ಹಲವು ಸಂಗೀತಗಾರರ ಆರ್ಕೆಸ್ಟ್ರಾಗಳಲ್ಲಿ ಡ್ರಮ್ ಬಾರಿಸಿದ್ದ ಅವರು ದೇಶ-ವಿದೇಶಗಳಲ್ಲಿ ನಡೆದ ಅನೇಕ ವೇದಿಕೆ ಕಾರ್ಯಕ್ರಮಗಳಲ್ಲಿ ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಿದ್ದರು.
ಆರ್‌ಸಿಬಿ ಪಂದ್ಯಗಳಲ್ಲಿ ಡ್ರಮ್ ಸದ್ದು
ದೇವ ಅವರಿಗೆ ಕ್ರಿಕೆಟ್ ಹಾಗೂ ಆರ್‌ಸಿಬಿ ತಂಡದ ಮೇಲೆ ವಿಶೇಷ ಅಭಿಮಾನವಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆರ್‌ಸಿಬಿ ಪಂದ್ಯಗಳಿಗೆ ತೆರಳಿ ಡ್ರಮ್ ಬಾರಿಸುವ ಮೂಲಕ ಆಟಗಾರರು ಹಾಗೂ ಅಭಿಮಾನಿಗಳನ್ನು ಹುರಿದುಂಬಿಸುತ್ತಿದ್ದರು. ತಮ್ಮ ಎಲೆಕ್ಟ್ರಿಕ್ ಬೀಟ್ಸ್ ಮತ್ತು ಡ್ರಮ್ಸ್ ಮೂಲಕ ಕ್ರೀಡಾಂಗಣದಲ್ಲಿ ವಿಶೇಷ ವಾತಾವರಣ ಸೃಷ್ಟಿಸುತ್ತಿದ್ದ ಅವರು ಆರ್‌ಸಿಬಿ ಅಭಿಮಾನಿಗಳಲ್ಲೂ ಚಿರಪರಿಚಿತರಾಗಿದ್ದರು.

