ಮಂಗಳೂರು : ನಗರದ ಎಮ್ಮೆಕೆರೆ ಕ್ರಾಸ್‌ನ ರಾಮಾಲಕ್ಷ್ಮೀ ನಾರಾಯಣ ಕನ್ವೆನ್ಷನ್ ಸಭಾಂಗಣದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿಗಳ ಚುನಾವಣೆ ಹಾಗೂ ಪದಗ್ರಹಣ ಕಾರ್ಯಕ್ರಮದ ವೇಳೆ ಪ್ಯಾಸೇಜ್‌ನ ತಡೆಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ 16 ವರ್ಷದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಹಳೆಯಂಗಡಿ ನಿವಾಸಿ ಮಹಮ್ಮದ್ ಇಲಿಯಾಸ್ ಮೊಯಿದಿನಬ್ಬ ಅವರ ಪುತ್ರ ಮಹಮ್ಮದ್ ಶಮ್ಮಾಝ್ (16) ಮೃತಪಟ್ಟ ವಿದ್ಯಾರ್ಥಿ. ಸೆ.26ರಂದು ನಡೆದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಮ್ಮಾಝ್ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದರೂ ಇದೀಗ ಮೃತಪಟ್ಟಿದ್ದಾರೆ.
ನಿರ್ಲಕ್ಷ್ಯದ ಆರೋಪ: ಇಬ್ಬರ ವಿರುದ್ಧ ಪ್ರಕರಣ
ಶಮ್ಮಾಝ್ ಅವರ ತಂದೆ ನೀಡಿದ ದೂರಿನ ಆಧಾರದಲ್ಲಿ ಕಾರ್ಯಕ್ರಮದ ಆಯೋಜಕರು ಹಾಗೂ ಕಟ್ಟಡದ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಾಂಡೇಶ್ವರದ ಪರೀಕ್ಷಿತ್ ರೈ ಹಾಗೂ ದಿನಕರ ಶೆಟ್ಟಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 106(1), 125(a), 125(b) ಹಾಗೂ 290ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಕಾರ್ಯಕ್ರಮದ ವೇಳೆ ಕುಸಿದ ತಡೆಗೋಡೆ
ಶನಿವಾರ ಮಧ್ಯಾಹ್ನ ಕನ್ವೆನ್ಷನ್ ಸಭಾಂಗಣದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿಗಳ ಚುನಾವಣೆ ನಡೆದಿತ್ತು. ವಿಜೇತರ ಘೋಷಣೆಯ ಬಳಿಕ ಪದಗ್ರಹಣ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಸಭಾಂಗಣದ ಒಳಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದ್ದ ಹಿನ್ನೆಲೆಯಲ್ಲಿ ಮೊದಲ ಮಹಡಿಯ ಪ್ಯಾಸೇಜ್‌ನಲ್ಲಿ ಹಲವರು ನಿಂತಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಡೆಗೋಡೆಗೆ ಒರಗಿ ನಿಂತಿದ್ದಾಗ ಏಕಾಏಕಿ ತಡೆಗೋಡೆ ಕುಸಿದಿದೆ. ಪರಿಣಾಮ ಮೂವರು ವಿದ್ಯಾರ್ಥಿಗಳು ಆಯತಪ್ಪಿ ಕೆಳಗೆ ಬಿದ್ದಿದ್ದು, ಕೆಳಭಾಗದಲ್ಲಿ ನಿಂತಿದ್ದ ಮತ್ತೋರ್ವ ವಿದ್ಯಾರ್ಥಿಯ ಮೇಲೆಯೂ ತಡೆಗೋಡೆ ಬಿದ್ದಿದೆ.
ನಾಲ್ವರು ವಿದ್ಯಾರ್ಥಿಗಳು ಗಾಯ
ಘಟನೆಯಲ್ಲಿ ಮಹಮ್ಮದ್ ಶನಾನ್ ಅಹಮ್ಮದ್ (18), ಹನೀಫ್ (23), ದಾವೂದ್ ಫರ್ಸಿನ್ ಅಹಮ್ಮದ್ (18) ಹಾಗೂ ಮಹಮ್ಮದ್ ಶಮ್ಮಾಝ್ (16) ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ತನಿಖೆ ಮುಂದುವರಿಸಿದ ಪೊಲೀಸರು
ತಡೆಗೋಡೆ ಕುಸಿದ ಘಟನೆಯ ಕುರಿತು ಈಗಾಗಲೇ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಶಮ್ಮಾಝ್ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಕರಣದ ಸ್ವರೂಪ ಬದಲಾಗಿದ್ದು, ಅವರ ತಂದೆಯ ದೂರಿನ ಆಧಾರದಲ್ಲಿ ಕಾರ್ಯಕ್ರಮದ ಆಯೋಜಕರು ಹಾಗೂ ಕಟ್ಟಡದ ಮಾಲೀಕರ ವಿರುದ್ಧ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಕಟ್ಟಡದ ತಡೆಗೋಡೆಯ ಸ್ಥಿತಿ, ಕಾರ್ಯಕ್ರಮದ ವೇಳೆ ಕೈಗೊಳ್ಳಲಾಗಿದ್ದ ಸುರಕ್ಷತಾ ಕ್ರಮಗಳು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮಾಡಲಾಗಿದ್ದ ವ್ಯವಸ್ಥೆಗಳು ಹಾಗೂ ಘಟನೆಯ ನಿಖರ ಕಾರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

