ಡಾ. ರಮಾನಂದ ಬನಾರಿಗೆ ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ

0
7

ಅ.18ರಂದು ಕಾಸರಗೋಡು ದಸರಾ ಕವಿ ಸಮ್ಮೇಳನದಲ್ಲಿ ಗೌರವ

ಕಾಸರಗೋಡು: ಖ್ಯಾತ ಕವಿ, ಸಾಹಿತಿ ಹಾಗೂ ಕನ್ನಡ ಹೋರಾಟಗಾರ ಡಾ. ರಮಾನಂದ ಬನಾರಿ ಅವರನ್ನು 2026ನೇ ಸಾಲಿನ **‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ’**ಗೆ ಆಯ್ಕೆ ಮಾಡಲಾಗಿದೆ.

ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ದಸರಾ ವೇದಿಕೆಯಲ್ಲಿ ಅ.11ರಿಂದ 20ರವರೆಗೆ ನಡೆಯಲಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ–2026’ರ ಅಂಗವಾಗಿ ಅ.18ರಂದು ಬೆಳಗ್ಗೆ 11 ಗಂಟೆಗೆ ಕಾಸರಗೋಡು ದಸರಾ ಕವಿ ಸಮ್ಮೇಳನ ನಡೆಯಲಿದೆ. ಇದೇ ಸಂದರ್ಭದಲ್ಲಿ ಡಾ. ರಮಾನಂದ ಬನಾರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಸಾಹಿತ್ಯ ಸಂಘಟಕ ಬಿ. ಶ್ರೀನಿವಾಸ್ ಬಹಾದ್ದೂರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಕವಿ ಸಮ್ಮೇಳನವನ್ನು ಚುಟುಕು ಬ್ರಹ್ಮ ಹಾಗೂ ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ. ಎಂ.ಜಿ.ಆರ್. ಅರಸ್, ಮೈಸೂರು ಉದ್ಘಾಟಿಸಲಿದ್ದಾರೆ. ಮೈಸೂರಿನ ಖ್ಯಾತ ಕವಿ, ಸಾಹಿತ್ಯ ರತ್ನ ಜಯಪ್ಪ ಹೊನ್ನಾಳಿ (ಜಯ ಕವಿ ಮೈಸೂರು) ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡು ದಸರಾ ಕವಿಗೋಷ್ಠಿ ನಡೆಯಲಿದೆ.

ರಾಷ್ಟ್ರಮಟ್ಟದ 75 ಮಂದಿ ಕವಿಗಳು ಭಾಗವಹಿಸಲಿರುವ ಕವಿ ಸಮ್ಮೇಳನದಲ್ಲಿ 21 ಮಂದಿ ಕವಿಗಳಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ–2026’ ನೀಡಿ ಗೌರವಿಸಲಾಗುವುದು ಎಂದು ಕಾಸರಗೋಡು ದಸರಾ ಸಂಚಾಲಕ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಮತ್ತು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಪಾಂಗೋಡು ಪ್ರವೀಣ್ ನಾಯಕ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ರಮಾನಂದ ಬನಾರಿ ಅವರ ಸಾಹಿತ್ಯ ಸೇವೆ ಹಾಗೂ ಕನ್ನಡ ಪರ ಚಟುವಟಿಕೆಗಳನ್ನು ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.