ಬೆಂಗಳೂರು : ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಪದವೀಧರರಿಗೆ ಕೆನರಾ ಬ್ಯಾಂಕ್ ಅವಕಾಶ ಕಲ್ಪಿಸಿದೆ. 2026–27ನೇ ಸಾಲಿಗೆ ಒಟ್ಟು 3,500 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದ್ದು, ಕರ್ನಾಟಕದಲ್ಲಿ 581 ಹುದ್ದೆಗಳು ಲಭ್ಯವಿವೆ.
ಅರ್ಹ ಅಭ್ಯರ್ಥಿಗಳು ಕೆನರಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಹಾಗೂ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ತರಬೇತಿ ಯೋಜನೆ (NATS) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಅ.1ರಂದು ಆರಂಭವಾಗಲಿದ್ದು, ಅ.17, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು. 2023ರ ಜ.1ರಿಂದ 2026ರ ಸೆ.1ರ ಅವಧಿಯಲ್ಲಿ ಪದವಿ ತೇರ್ಗಡೆಯಾದವರು ಅರ್ಹರಾಗಿರುತ್ತಾರೆ. 2026ರ ಸೆ.1ಕ್ಕೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಸಡಲಿಕೆ ಅನ್ವಯವಾಗಲಿದೆ.
ಅಪ್ರೆಂಟಿಸ್‌ಶಿಪ್ ತರಬೇತಿ ಅವಧಿ 12 ತಿಂಗಳಾಗಿದ್ದು, ಮಾಸಿಕ ₹16,650 ಸ್ಟೈಪೆಂಡ್ ನೀಡಲಾಗುತ್ತದೆ. ಈ ನೇಮಕಾತಿಗೆ ಯಾವುದೇ ಬೃಹತ್ ಲಿಖಿತ ಪರೀಕ್ಷೆ ಇರುವುದಿಲ್ಲ. 12ನೇ ತರಗತಿ ಅಥವಾ ಡಿಪ್ಲೊಮಾದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಬಳಿಕ ದಾಖಲೆ ಪರಿಶೀಲನೆ ಹಾಗೂ ಸ್ಥಳೀಯ ಭಾಷಾ ಪರೀಕ್ಷೆ ನಡೆಯಲಿದೆ.
ಅರ್ಜಿ ಶುಲ್ಕದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗಿದ್ದು, ಇತರ ಅಭ್ಯರ್ಥಿಗಳಿಗೆ ₹500 ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು NATS ಪೋರ್ಟಲ್‌ನಲ್ಲಿ ತಮ್ಮ ಪ್ರೊಫೈಲ್ ಅನ್ನು ಶೇ.100ರಷ್ಟು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಅರ್ಹತೆ, ಹುದ್ದೆಗಳ ವಿವರ, ಅರ್ಜಿ ವಿಧಾನ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.

