ಬೆಂಗಳೂರು : ರಾಜ್ಯದ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶಿಕ್ಷಣ ಇಲಾಖೆ ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಿಹಿಸುದ್ದಿ ನೀಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026–27ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ನವರಾತ್ರಿ ಹಾಗೂ ದಸರಾ ಹಬ್ಬದ ಪ್ರಯುಕ್ತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 19 ದಿನಗಳ ಮಧ್ಯಂತರ ರಜೆ ಘೋಷಿಸಲಾಗಿದೆ.
ಈ ರಜೆ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯನ್ನು ಅನುಸರಿಸುವ ಖಾಸಗಿ ಶಾಲೆಗಳಿಗೆ ಅನ್ವಯವಾಗಲಿದೆ.
ಇದೇ ವೇಳೆ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಮಂಡಳಿಗೆ ಸೇರಿದ ಕೆಲವು ಸ್ವತಂತ್ರ ಖಾಸಗಿ ಶಾಲೆಗಳು ತಮ್ಮ ಆಡಳಿತ ಮಂಡಳಿಯ ನಿಯಮಾವಳಿಗಳಿಗೆ ಅನುಗುಣವಾಗಿ ರಜೆಯ ದಿನಗಳನ್ನು ನಿಗದಿಪಡಿಸುವ ಸಾಧ್ಯತೆಯಿದೆ.
ದಸರಾ ರಜೆಯ ಬಳಿಕ ಅಕ್ಟೋಬರ್ 22ರಿಂದ, ಗುರುವಾರ ರಾಜ್ಯಾದ್ಯಂತ ಶಾಲೆಗಳು ಪುನರಾರಂಭಗೊಳ್ಳಲಿವೆ. ಶಾಲೆಗಳು ಪುನರಾರಂಭಗೊಂಡ ಬಳಿಕ ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯಾರ್ಧದ ಶೈಕ್ಷಣಿಕ ಚಟುವಟಿಕೆಗಳು ಅಧಿಕೃತವಾಗಿ ಆರಂಭವಾಗಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ದಸರಾ ಹಬ್ಬದ ಸಂದರ್ಭದಲ್ಲಿ 19 ದಿನಗಳ ನಿರಂತರ ರಜೆ ದೊರೆಯಲಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ರಜೆ ಅವಧಿಯನ್ನು ಮುಂಚಿತವಾಗಿ ಯೋಜಿಸಿಕೊಳ್ಳಲು ಅನುಕೂಲವಾಗಲಿದೆ.

