ಮತದಾರರ ಪಟ್ಟಿ ಪರಿಷ್ಕರಣೆ ವಿವಾದ: ಕಾಂಗ್ರೆಸ್ ಪ್ರತಿಭಟನೆ

0
15

ಉಡುಪಿ : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ, ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ಬಂಧನಕ್ಕೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿಗಳನ್ನು ದಹಿಸಿ ತಮ್ಮ ಆಕ್ರೋಶ ಹೊರಹಾಕಿದರು. ತದನಂತರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಗೇಟ್‌ಗಳನ್ನು ಬಂದ್ ಮಾಡಿ ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಕೆಲ ಕಾರ್ಯಕರ್ತರು ಗೇಟ್ ಏರಿ ಆಕ್ರೋಶ ವ್ಯಕ್ತಪಡಿಸಿದರೆ, ಮತ್ತಷ್ಟು ಮಂದಿ ಗೇಟ್ ಎದುರೇ ಧರಣಿ ಕುಳಿತು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗಿದರು.’

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಎಸ್‌ಐಆರ್ ವಿಚಾರದಲ್ಲಿ ಕೇಂದ್ರ ಚುನಾವಣಾ ಆಯೋಗದ ನಡೆ ಅನುಮಾನಾಸ್ಪದವಾಗಿದ್ದು, ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವನ್ನು ಬಳಸಿಕೊಂಡು ಜನವಿರೋಧಿ ಕೆಲಸ ಮಾಡುತ್ತಿದೆ. ಈ ಅಕ್ರಮಕ್ಕೆ ಕಾರಣರಾದ ಜ್ಞಾನೇಶ್ ಕುಮಾರ್ ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಮತ್ತು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು. ಈ ಹೋರಾಟವನ್ನು ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಗ್ರಾಮೀಣ ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಅವರು ಎಚ್ಚರಿಸಿದರು.’

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಲಕ್ಷಾಂತರ ಅರ್ಹ ನಾಗರಿಕರನ್ನು ಮತದಾನದ ಹಕ್ಕಿನಿಂದ ವಂಚಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಬಡವರು, ಕಾರ್ಮಿಕರು, ಆದಿವಾಸಿಗಳು, ಅಲೆಮಾರಿಗಳು, ದಲಿತರು ಹಾಗೂ ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿಕೊಂಡು ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆರವುಗೊಳಿಸಲಾಗಿದೆ. ‘ಓಟು ಚೋರಿ’ ಮಾಡುವ ಮೂಲಕ ಚುನಾವಣೆಯಲ್ಲಿ ಅಕ್ರಮವಾಗಿ ಗೆಲುವು ಸಾಧಿಸುವುದು ಕೇಂದ್ರದ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಸಭೆಯಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ, ಕೆಪಿಸಿಸಿ ವಕ್ತಾರೆ ವರೋನಿಕಾ ಕರ್ನೆಲಿಯೋ ಹಾಗೂ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್ ಮಾತನಾಡಿ, ಪ್ರಜಾಪ್ರಭುತ್ವದ ಮೂಲಭೂತ ಹಕ್ಕನ್ನು ಕಸಿಯುವ ಪ್ರಯತ್ನದ ವಿರುದ್ಧ ವಾಗ್ದಾಳಿ ನಡೆಸಿದರು.ಪ್ರಮುಖ ನಾಯಕರ ಭಾಗಿಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಕೊಳ್ಕೆಬೈಲು, ಅಶೋಕ್ ಕುಮಾರ್ ಕೊಡವೂರು, ಪ್ರಶಾಂತ್ ಜತ್ತನ್ನ, ಪ್ರಖ್ಯಾತ್ ಶೆಟ್ಟಿ, ಹರಿಪ್ರಸಾದ್ ರೈ, ಜ್ಯೋತಿ ಹೆಬ್ಬಾರ್, ಹಬೀಬ್ ಅಲಿ, ಶಬ್ಬೀರ್ ಉಡುಪಿ, ಶೇಕ್ ವಾಹೀದ್, ಇಸ್ಮಾಯಿಲ್ ಆತ್ರಾಡಿ, ಎಂ.ಪಿ. ಮೊದಿನಬ್ಬ, ಅಬ್ದುಲ್ ಅಝೀಜ್ ಹೆಜಮಾಡಿ, ಹರೀಶ್ ಕಿಣಿ, ಗಣೇಶ್ ನೆರ್ಗಿ, ರಿಯಾಝ್ ಕೋಡಿ, ರಾಜು ಪೂಜಾರಿ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.