ವಿಶ್ವ ಭಾರತಿ ಯಕ್ಷ ಸಂಭ್ರಮ 900: ಮೂರು ದಿನ ‘ಯಕ್ಷ ತ್ರಿವೇಣಿ’

0
106

ಮುಡಿಪು : ವಿಶ್ವ ಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್‌ (ರಿ.), ಮುಡಿಪು ಹಾಗೂ ಕಲಾಶ್ರಯ ದಾಸಕೋಡಿ ಇವರ ಸಹಭಾಗಿತ್ವದಲ್ಲಿ ‘ವಿಶ್ವ ಭಾರತಿ ಯಕ್ಷ ಸಂಭ್ರಮ 900’ ಕಾರ್ಯಕ್ರಮದ ಅಂಗವಾಗಿ ಮೂರು ದಿನಗಳ ‘ಯಕ್ಷ ತ್ರಿವೇಣಿ’ ಕಾರ್ಯಕ್ರಮ ನಾಳೆಯಿಂದ ಕಲಾಶ್ರಯ, ದಾಸಕೋಡಿಯಲ್ಲಿ ಜರಗಲಿದೆ.

ಯಕ್ಷಗಾನ ಕಲೆಯ ವೈಭವ, ಪರಂಪರೆ ಹಾಗೂ ತಾಳಮದ್ದಳೆಯ ಸೊಬಗನ್ನು ಕಲಾಭಿಮಾನಿಗಳಿಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಯಕ್ಷ ಸಂಭ್ರಮದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲಾ ಕಾರ್ಯಕ್ರಮಗಳು ನಡೆಯಲಿವೆ.

ನಾಳೆ ನಡೆಯಲಿರುವ ಉದ್ಘಾಟನಾ ಸಭಾ ಕಾರ್ಯಕ್ರಮವು ಮಾಜಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೆ. ಸೂರ್ಯನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಜೀಪ ಮಾಘಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಬಂಟ್ವಾಳ ಕೂಟ ಮಹಾ ಜಗತ್ತು ಅಧ್ಯಕ್ಷ ಕೆ. ರಮೇಶ್ ಹೊಳ್ಳ, ನಿಕಟಪೂರ್ವ ಅಧ್ಯಕ್ಷ ಜಗದೀಶ ಹೊಳ್ಳ ಹಾಗೂ ಸಂಚಾಲಕ ಪ್ರಶಾಂತ ಹೊಳ್ಳ ಉಪಸ್ಥಿತರಿರುವರು.

ಸಭಾ ಕಾರ್ಯಕ್ರಮದ ಬಳಿಕ ಸರಯು ಯಕ್ಷ ಬಳಗ, ಕೋಡಿಕಲ್ ಇವರಿಂದ ‘ದಾಸರ ಥಿ ದರ್ಶನ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಮೂರು ದಿನಗಳ ಕಾಲ ನಡೆಯಲಿರುವ ‘ಯಕ್ಷ ತ್ರಿವೇಣಿ’ಯಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆಯ ಕಲಾ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಯಕ್ಷಗಾನಾಭಿಮಾನಿಗಳು, ಕಲಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಆಯೋಜಕರು ತಿಳಿಸಿದ್ದಾರೆ.