ಟೂರಿಸ್ಟ್ ವಾಹನದ ಡಿಕ್ಕಿಗೆ ಶಾಲಾ ಬಸ್‌ ಪಲ್ಟಿ

0
34

ಮುಲ್ಕಿ : ಶಾಲಾ ಬಸ್‌ಗೆ ಹಿಂಬದಿಯಿಂದ ಟೂರಿಸ್ಟ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಸ್‌ ರಸ್ತೆ ಬದಿಯ ಆಳವಾದ ಕಮರಿಗೆ ಉರುಳಿಬಿದ್ದ ಘಟನೆ ಅಕ್ಟೋಬರ್ 23ರ ಶುಕ್ರವಾರ ಸಂಜೆ ಕೊಲ್ನಾಡುವಿನಲ್ಲಿ ನಡೆದಿದೆ. ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಇತರ ಕೆಲ ವಿದ್ಯಾರ್ಥಿಗಳು ಹಾಗೂ ಇಬ್ಬರು ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮಂಗಳೂರಿನ ಕುಳಾಯಿ ಮೂಲದ ಖಾಸಗಿ ಶಾಲೆಗೆ ಸೇರಿದ ಬಸ್‌ ಕೊಲ್ನಾಡುಗುತ್ತು ಸಮೀಪ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬಸ್‌ ಯೂ-ಟರ್ನ್ ಪಡೆದು ವಿದ್ಯಾರ್ಥಿನಿಯೊಬ್ಬಳನ್ನು ಇಳಿಸಿದ ಬಳಿಕ ಮುಂದಕ್ಕೆ ಚಲಿಸುತ್ತಿದ್ದಾಗ, ಹಿಂಬದಿಯಿಂದ ವೇಗವಾಗಿ ಬಂದ ತಮಿಳುನಾಡು ನೋಂದಣಿಯ ಟೂರಿಸ್ಟ್ ವಾಹನವೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ತೀವ್ರತೆಗೆ ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್‌ ರಸ್ತೆ ಪಕ್ಕದ ಆಳವಾದ ಕಮರಿಗೆ ಉರುಳಿಬಿದ್ದಿದೆ. ಪರಿಣಾಮ ಬಸ್‌ಗೆ ಭಾರೀ ಹಾನಿಯಾಗಿದೆ. ಅಪಘಾತದ ವೇಳೆ ಬಸ್‌ನಲ್ಲಿ ಒಟ್ಟು 17 ವಿದ್ಯಾರ್ಥಿಗಳಿದ್ದರು. ಗಂಭೀರವಾಗಿ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಶಾಲಾ ಬಸ್‌ ಚಾಲಕ ಹಾಗೂ ಟೂರಿಸ್ಟ್ ವಾಹನದ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಬಸ್‌ನಲ್ಲಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು.

ಘಟನೆಯ ಮಾಹಿತಿ ತಿಳಿದು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.