ಉಡುಪಿ: ಕರಾವಳಿಯ ಹೆಮ್ಮೆಯ ಯಕ್ಷಗಾನ ಕಲೆಗೆ ‘ಕರ್ನಾಟಕ ರಾಜ್ಯ ಕಲೆ’ ಎಂಬ ಅಧಿಕೃತ ಮಾನ್ಯತೆ ನೀಡುವಂತೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿಯ ಸರ್ವಸದಸ್ಯರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಯಕ್ಷಗಾನವು ಕರ್ನಾಟಕದ ವಿಶಿಷ್ಟ ಸಾಂಪ್ರದಾಯಿಕ ರಂಗಕಲೆಯಾಗಿದ್ದು, ಕರಾವಳಿ ಜನಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಅಭಿನಯ, ವೇಷಭೂಷಣ, ಮುಖವರ್ಣಿಕೆ ಹಾಗೂ ರಂಗಸಜ್ಜಿಕೆಯನ್ನು ಒಂದೇ ವೇದಿಕೆಯಲ್ಲಿ ಸಮನ್ವಯಗೊಳಿಸುವ ಯಕ್ಷಗಾನವನ್ನು ರಾಜ್ಯದ ಅಧಿಕೃತ ಕಲೆಯಾಗಿ ಘೋಷಿಸುವ ಅಗತ್ಯವಿದೆ ಎಂದು ಅಕಾಡೆಮಿ ಮನವಿಯಲ್ಲಿ ತಿಳಿಸಿದೆ.
ಯಕ್ಷಗಾನದ ಪಡುವಲಪಾಯ ಮತ್ತು ಮೂಡಲಪಾಯ ಪ್ರಕಾರಗಳು ತಮ್ಮದೇ ಆದ ವೈಶಿಷ್ಟ್ಯ ಹೊಂದಿದ್ದು, ಪಡುವಲಪಾಯದಲ್ಲಿ ತೆಂಕುತಿಟ್ಟು, ಬಡಗುತಿಟ್ಟು ಹಾಗೂ ಬಡಾಬಡಗು ಪ್ರಕಾರಗಳು ಪ್ರಮುಖವಾಗಿವೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶತಮಾನಗಳಿಂದಲೂ ಈ ಕಲೆ ಜನಪ್ರಿಯವಾಗಿದೆ.
ಯಕ್ಷಗಾನ ಕೇವಲ ಪ್ರದರ್ಶನ ಕಲೆಯಲ್ಲ. ಸಾವಿರಾರು ಕಲಾವಿದರು, ಭಾಗವತರು, ವಾದ್ಯಗಾರರು, ವೇಷಭೂಷಣ ಮತ್ತು ಮುಖವರ್ಣಿಕೆ ಕಲಾವಿದರು, ರಂಗಸಜ್ಜಿಕೆ ಸಿಬ್ಬಂದಿ, ಧ್ವನಿ-ಬೆಳಕು ತಂತ್ರಜ್ಞರು, ಸಂಘಟಕರು ಸೇರಿದಂತೆ ದೊಡ್ಡ ಸಮುದಾಯವೊಂದು ಇದನ್ನು ಅವಲಂಬಿಸಿದೆ. ಆದ್ದರಿಂದ ಯಕ್ಷಗಾನದ ಸಂರಕ್ಷಣೆ ಕಲೆಯ ಜೊತೆಗೆ ಅನೇಕ ಕುಟುಂಬಗಳ ಜೀವನೋಪಾಯಕ್ಕೂ ಸಂಬಂಧಿಸಿದೆ ಎಂದು ಅಕಾಡೆಮಿ ಅಭಿಪ್ರಾಯಪಟ್ಟಿದೆ.
ರಾಜ್ಯದಲ್ಲಿ 100ಕ್ಕೂ ಅಧಿಕ ಯಕ್ಷಗಾನ ಮೇಳಗಳು ಕಾರ್ಯನಿರ್ವಹಿಸುತ್ತಿದ್ದು, 15 ಸಾವಿರಕ್ಕೂ ಅಧಿಕ ವೃತ್ತಿಪರ ಕಲಾವಿದರು ಹಾಗೂ ಸಾವಿರಾರು ಹವ್ಯಾಸಿ ಕಲಾವಿದರು ಈ ಕ್ಷೇತ್ರದೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಯಕ್ಷಗಾನದ ಕುರಿತು ಸಂಶೋಧನೆಗಳೂ ನಡೆದಿದ್ದು, ಮೂಡಲಪಾಯ ಮತ್ತು ಪಡುವಲಪಾಯ ಯಕ್ಷಗಾನದ ಕುರಿತು 50ಕ್ಕೂ ಅಧಿಕ ಪಿಎಚ್ಡಿ ಅಧ್ಯಯನಗಳು ನಡೆದಿವೆ ಎಂದು ಅಕಾಡೆಮಿ ತಿಳಿಸಿದೆ.
ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಗುರುತಾಗಿರುವ ಯಕ್ಷಗಾನ ಪ್ರವಾಸೋದ್ಯಮಕ್ಕೂ ಮಹತ್ವದ ಕೊಡುಗೆ ನೀಡುತ್ತಿದೆ. ಭಾರತ ಸರ್ಕಾರದ ಸಂಗೀತ ನಾಟಕ ಅಕಾಡೆಮಿಯೂ ಯಕ್ಷಗಾನವನ್ನು ಕರ್ನಾಟಕದ ಸಾಂಪ್ರದಾಯಿಕ ರಂಗರೂಪಗಳಲ್ಲಿ ಒಂದಾಗಿ ಗುರುತಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೇರಳದ ಕಥಕ್ಕಳಿ, ಮೋಹಿನಿಯಾಟ್ಟಂ, ಮಹಾರಾಷ್ಟ್ರದ ಲಾವಣಿ ಹಾಗೂ ಆಂಧ್ರಪ್ರದೇಶದ ಕೂಚಿಪುಡಿಯಂತೆ ಕರ್ನಾಟಕದಲ್ಲೂ ಯಕ್ಷಗಾನಕ್ಕೆ ರಾಜ್ಯ ಕಲೆಯ ಅಧಿಕೃತ ಸ್ಥಾನಮಾನ ನೀಡಿ, ಅದರ ಸಂರಕ್ಷಣೆ, ಉತ್ತೇಜನ ಹಾಗೂ ಸಮಗ್ರ ಅಭಿವೃದ್ಧಿಗೆ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಯಕ್ಷಗಾನ ಅಕಾಡೆಮಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

