ಕಣ್ಣಿನೊಳಗೆ ಲೆನ್ಸ್‌ಗಳ ಗುಚ್ಛ ! 67 ವರ್ಷದ ಮಹಿಳೆಯ ಅಪರೂಪದ ಪ್ರಕರಣ

0
188

ಕಣ್ಣಿನ ಪೊರೆ ಸಮಸ್ಯೆ ಇರಬಹುದು ಎಂದು ಆಸ್ಪತ್ರೆಗೆ ಬಂದಿದ್ದ 67 ವರ್ಷದ ಮಹಿಳೆಯ ಕಣ್ಣಿನಲ್ಲಿ ಬರೋಬ್ಬರಿ 27 ಕಾಂಟ್ಯಾಕ್ಟ್ ಲೆನ್ಸ್‌ಗಳು ಪತ್ತೆಯಾದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ ಈ ಘಟನೆಯು ಇಂಗ್ಲೆಂಡ್ ನಲ್ಲಿ ನಡೆದಿದೆ.

ಮಹಿಳೆಗೆ ದೃಷ್ಟಿ ಮಸುಕಾಗುತ್ತಿದ್ದು, ಅಕ್ಷರಗಳು ಸರಿಯಾಗಿ ಕಾಣಿಸುತ್ತಿಲ್ಲ ಎಂಬ ಸಮಸ್ಯೆ ಇತ್ತು. ವಯಸ್ಸಾಗಿರುವುದರಿಂದ ಕಣ್ಣಿನ ಪೊರೆ ಬಂದಿರಬಹುದು ಎಂದು ಅವರು ಭಾವಿಸಿದ್ದರು. ಆದರೆ ವೈದ್ಯರು ಕಣ್ಣನ್ನು ಪರೀಕ್ಷಿಸಿದಾಗ ಪೊರೆ ಇಲ್ಲದಿರುವುದು ಮಾತ್ರವಲ್ಲದೆ, ಕಣ್ಣಿನೊಳಗೆ ಒಂದಕ್ಕೊಂದು ಅಂಟಿಕೊಂಡಿದ್ದ ಕಾಂಟ್ಯಾಕ್ಟ್ ಲೆನ್ಸ್‌ಗಳ ಗುಚ್ಛ ಕಂಡುಬಂದಿದೆ.

ಪರೀಕ್ಷೆ ವೇಳೆ ಮೊದಲು 17 ಲೆನ್ಸ್‌ಗಳು ಪತ್ತೆಯಾಗಿದ್ದು, ಬಳಿಕ ಮತ್ತಷ್ಟು ಪರಿಶೀಲಿಸಿದಾಗ ಇನ್ನೂ 10 ಲೆನ್ಸ್‌ಗಳು ಪತ್ತೆಯಾಗಿವೆ. ಒಟ್ಟು 27 ಲೆನ್ಸ್‌ಗಳನ್ನು ವೈದ್ಯರು ಹೊರತೆಗೆದಿದ್ದಾರೆ. ವರದಿಗಳ ಪ್ರಕಾರ, ಮಹಿಳೆ ಕಳೆದ 35 ವರ್ಷಗಳಿಂದ ಬಿಸಾಡಬಹುದಾದ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ.

ಎಲ್ಲ ಲೆನ್ಸ್‌ಗಳನ್ನು ತೆಗೆದ ಬಳಿಕ ಮಹಿಳೆಯ ಕಣ್ಣುಗಳ ಸ್ಥಿತಿ ಸುಧಾರಿಸಿದ್ದು, ದೃಷ್ಟಿಯಲ್ಲೂ ಉತ್ತಮ ಬದಲಾವಣೆ ಕಂಡುಬಂದಿದೆ. ಕಣ್ಣಿನ ತಜ್ಞರಾದ ಡಾ. ರೂಪಲ್ ಮೊರ್ಜರಿಯಾ ಹಾಗೂ ಅವರ ತಂಡಕ್ಕೆ ಈ ರೀತಿಯ ಪ್ರಕರಣ ಇದೇ ಮೊದಲನೆಯದಾಗಿತ್ತು ಎಂದು ತಿಳಿಸಲಾಗಿದೆ.

ವೈದ್ಯರ ಪ್ರಕಾರ, ಕೆಲವು ಸಂದರ್ಭಗಳಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಕಣ್ಣಿನೊಳಗೆ ಸಿಲುಕಿಕೊಳ್ಳಬಹುದು. ಆದರೆ ಇಷ್ಟೊಂದು ಸಂಖ್ಯೆಯ ಲೆನ್ಸ್‌ಗಳು ಒಂದರ ಮೇಲೊಂದು ಸೇರಿಕೊಂಡಿದ್ದರೂ ಮಹಿಳೆಗೆ ಗಮನಕ್ಕೆ ಬಾರದಿರುವುದು ಅಚ್ಚರಿ ಮೂಡಿಸಿದೆ.

ಲೆನ್ಸ್ ಬಳಸುವವರು ಎಚ್ಚರ ವಹಿಸಿ

ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ವೈದ್ಯರು ಸೂಚಿಸಿರುವ ಅವಧಿಗಿಂತ ಹೆಚ್ಚು ಕಾಲ ಧರಿಸಬಾರದು. ಲೆನ್ಸ್ ಧರಿಸಿಕೊಂಡೇ ಮಲಗುವುದನ್ನು ತಪ್ಪಿಸಬೇಕು. ಲೆನ್ಸ್ ಮುಟ್ಟುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದು ಒಣಗಿಸಬೇಕು. ಲೆನ್ಸ್‌ಗಳನ್ನು ನಿಯಮಿತವಾಗಿ ಬದಲಾಯಿಸುವುದರ ಜೊತೆಗೆ, ಕಣ್ಣು ಕೆಂಪಾಗುವುದು, ನೋವು, ಉರಿ ಅಥವಾ ದೃಷ್ಟಿ ಮಸುಕಾಗುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸುವುದು ಅಗತ್ಯ.