
ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಅಳಿಕೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಕಾನತ್ತಡ್ಕ ಶಾಲೆಯಲ್ಲಿ ಬೃಹತ್ ಉಚಿತ ವೈದ್ಯಕೀಯ ಹಾಗೂ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಅಕ್ಟೋಬರ್ 2ರಂದು ನಡೆದ ಶಿಬಿರದಲ್ಲಿ ಸುಮಾರು 125 ಮಂದಿ ಸಾರ್ವಜನಿಕರು ಭಾಗವಹಿಸಿ ವೈದ್ಯಕೀಯ ಹಾಗೂ ಕಣ್ಣಿನ ತಪಾಸಣೆಯ ಪ್ರಯೋಜನ ಪಡೆದುಕೊಂಡರು. ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ದೊರಕಿಸುವುದು ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಬಿರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಮುನೀರ್ ದರ್ಬೆ ಉದ್ಘಾಟಿಸಿದರು. ಪದ್ಮನಾಭ ಪೂಜಾರಿ ಸನ್ನಗುತ್ತು ಅಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷ ರಾಜೇಂದ್ರ ರೈ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಮನ್ ಜೆ. ಶೆಟ್ಟಿ, ಎ.ಜೆ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಾಮನ್ ನಾಯಕ್, ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕಾನತ್ತಡ್ಕ ಶಾಲೆಯ ಮುಖ್ಯೋಪಾಧ್ಯಾಯ ಐತ್ತಪ್ಪ ನಾಯ್ಕ, ಶಿಕ್ಷಕರು, ವಲಯ ಸೇವಾ ಪ್ರತಿನಿಧಿಗಳು, ಶೌರ್ಯ ಘಟಕದ ಮೇಲ್ವಿಚಾರಕರು, ಸಂಯೋಜಕರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಶಿಬಿರದಲ್ಲಿ ವೈದ್ಯರು ಸಾರ್ವಜನಿಕರನ್ನು ತಪಾಸಣೆ ನಡೆಸಿ ಅಗತ್ಯ ಆರೋಗ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಕಣ್ಣಿನ ತಪಾಸಣೆಯೊಂದಿಗೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. ಒಂದೇ ಸ್ಥಳದಲ್ಲಿ ಅಗತ್ಯ ವೈದ್ಯಕೀಯ ಸೇವೆ ದೊರಕಿದ ಹಿನ್ನೆಲೆಯಲ್ಲಿ ಶಿಬಿರವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಶಿಬಿರದ ಯಶಸ್ಸಿಗೆ ಅಳಿಕೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ 15 ಸದಸ್ಯರು ಸಕ್ರಿಯವಾಗಿ ಸೇವೆ ಸಲ್ಲಿಸಿದರು. ರಾಜೇಂದ್ರ ರೈ, ಸರಸ್ವತಿ, ಚಂದ್ರಶೇಖರ್, ಲೋಕೇಶ್, ಪುಟ್ಟಣ್ಣ, ಲಕ್ಷ್ಮಣ್, ದೀಪಕ್, ಸುರೇಶ್ ಅಜ್ಜಿನಡ್ಕ, ರವೀಶ್, ಕುಶಾಲಪ್ಪ, ಅಮಿತ್, ಪ್ರೇಮ, ಗಣೇಶ್, ವಿನೋದ್ ಹಾಗೂ ಸುರೇಶ್ ಸ್ವಯಂಸೇವಕರಾಗಿ ಪಾಲ್ಗೊಂಡರು.
