ನಾಪತ್ತೆಯಾಗಿದ್ದ ಟಯರ್ ಅಂಗಡಿ ಮಾಲೀಕ ಶವವಾಗಿ ಪತ್ತೆ

0
97

ಉಪ್ಪಿನಂಗಡಿ : ಕುಮಾರಧಾರ ಹಳೇ ಸೇತುವೆ ಮೇಲೆ ಬೈಕ್ ಹಾಗೂ ಮೊಬೈಲ್ ಇಟ್ಟು ನಾಪತ್ತೆಯಾಗಿದ್ದ ಹಿರೇಬಂಡಾಡಿಯ ಪರಾಬೆ ನಿವಾಸಿ ಮಾಧವ ಗೌಡ (44) ಅವರ ಶವ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮಾಧವ ಗೌಡ ಅವರು ಇತ್ತೀಚೆಗಷ್ಟೇ ಆತೂರಿನಲ್ಲಿ ಟಯರ್ ಪಂಕ್ಚರ್ ಅಂಗಡಿ ಆರಂಭಿಸಿದ್ದರು. ಅಕ್ಟೋಬರ್ 2ರಂದು ಮನೆಯಿಂದ ಅಂಗಡಿಗೆ ತೆರಳಿದ್ದ ಅವರು ಬಳಿಕ ಮನೆಗೆ ಮರಳದೆ ನಾಪತ್ತೆಯಾಗಿದ್ದರು. ಅವರ ಬೈಕ್ ಹಾಗೂ ಮೊಬೈಲ್ ಫೋನ್ ಉಪ್ಪಿನಂಗಡಿಯ ಕುಮಾರಧಾರ ನದಿಯ ಹಳೇ ಸೇತುವೆ ಮೇಲೆ ಪತ್ತೆಯಾಗಿತ್ತು.

ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆಯ ಹಿನ್ನೆಲೆಯಲ್ಲಿ ಅಕ್ಟೋಬರ್ 4ರಂದು ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ದೋಣಿಯ ಮೂಲಕ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಮಧ್ಯಾಹ್ನದಿಂದ ಸಂಜೆಯವರೆಗೆ ಕಾರ್ಯಾಚರಣೆ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.

ಎರಡು ದಿನಗಳ ಬಳಿಕ ನೆಕ್ಕಿಲಾಡಿ ಗ್ರಾಮದ ಬೊಳ್ಳಾರ್ ಸಮೀಪ ನೇತ್ರಾವತಿ ನದಿಯಲ್ಲಿ ಮಾಧವ ಗೌಡ ಅವರ ಶವ ಪತ್ತೆಯಾಗಿದೆ. ಘಟನೆ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.