ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಐದು ವರ್ಷದ ಸಾರ್ಥಕ ಶ್ರಮ

0
90

32 ಗ್ರಾಮಗಳಲ್ಲಿ ಸಾಹಿತ್ಯ ಸಂಭ್ರಮ ; 6,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವೇದಿಕೆ

ಬಲ್ನಾಡು, ಪುತ್ತೂರು : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಗ್ರಾಮ ಪಂಚಾಯತ್ ಬಲ್ನಾಡು ಹಾಗೂ ಕನ್ನಡ ಸಂಘ, ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜು ಬಲ್ನಾಡು ಇದರ ಸಹಕಾರದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಹಾಗೂ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ, ಅಬುಧಾಬಿ ಇವರ ಮಹಾಪೋಷಕತ್ವದಲ್ಲಿ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಅಭಿಯಾನದ ಅಂಗವಾಗಿ ಆಯೋಜಿಸಲಾಗುತ್ತಿದ್ದ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ–22ರ ಕೊನೆಯ ಕಾರ್ಯಕ್ರಮ ಅಕ್ಟೋಬರ್ 2ರಂದು ಬಲ್ನಾಡಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಕೋಟ ಶಿವರಾಮ ಕಾರಂತ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು.

ಈ ಮೂಲಕ ಪುತ್ತೂರು ತಾಲೂಕಿನ 32 ಗ್ರಾಮಗಳಲ್ಲಿ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮಗಳನ್ನು ನಡೆಸಿದ ಹೆಗ್ಗಳಿಕೆಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಾತ್ರವಾಯಿತು. ಕಳೆದ ಐದು ವರ್ಷಗಳಿಂದ ನಿರಂತರವಾಗಿ ನಡೆದ ಈ ಅಭಿಯಾನದ ಮೂಲಕ 32 ಗ್ರಾಮ ದ ಗ್ರಾಮೀಣ ವಿದ್ಯಾರ್ಥಿಗಳನ್ನು ಸಾಹಿತ್ಯದತ್ತ ಸೆಳೆಯುವುದರ ಜೊತೆಗೆ ಅವರಿಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ಕಲ್ಪಿಸಲಾಯಿತು.

ಕನ್ನಡ ಭುವನೇಶ್ವರಿಯೊಂದಿಗೆ ಸಾಧಕರ ಮೆರವಣಿಗೆ

ಕಾರ್ಯಕ್ರಮದ ವಿಶೇಷತೆಯಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯ ದ್ವಾರದಿಂದ ಕನ್ನಡ ಭುವನೇಶ್ವರಿಯ ಭಾವಚಿತ್ರದೊಂದಿಗೆ ಸರ್ವಾಧ್ಯಕ್ಷೆ ಕುಮಾರಿ ಪೂರ್ಣಶ್ರೀ, ಸಮಾರೋಪ ಭಾಷಣ ಗಾರ್ತಿ ಕು.ಫಾತಿಮತ್ ಶಿಫಾನ ಹಾಗೂ ಗ್ರಾಮದ ಸಾಧಕರನ್ನು ಶಾಲೆಯ ಘೋಷವಾದ್ಯದೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ಗ್ರಾಮದ ಸಾಧಕರಲ್ಲಿ ಒಬ್ಬರಾದ ಸುರೇಶ್ ಬಲ್ನಾಡು ಅವರು ಆವಿಷ್ಕರಿಸಿದ ‘ಬೊಲ್ವಾರ್’ ಮಾವಿನ ಹಣ್ಣಿನ ಸಸಿ ಯನ್ನು ನೆಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ತಾಲೂಕು ಪಂಚಾಯತ್ ಪುತ್ತೂರಿನ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಗ್ರಾಮಗಳಲ್ಲಿ ಸಾಧನೆ ಮಾಡಿರುವ ಮತ್ತು ಮಾಡುತ್ತಿರುವ ಪ್ರತಿಯೊಬ್ಬ ಸಾಧಕರನ್ನು ಸನ್ಮಾನಿಸುವ ಕಾರ್ಯ ಬಹಳ ಅಚ್ಚುಕಟ್ಟಾಗಿದೆ. ಗ್ರಾಮೀಣ ವಿಭಾಗದ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುತ್ತಿರುವುದು ಅತ್ಯುತ್ತಮ ಕೆಲಸವಾಗಿದೆ. ಶುಭವಾಗಲಿ” ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ಡಿ. ಮಾತನಾಡಿ, “ಯಾಂತ್ರಿಕತೆಯ ಯುಗದಲ್ಲಿ ಸಾಹಿತ್ಯದ ಮೂಲಕ ವಿದ್ಯಾರ್ಥಿಗಳನ್ನು ಪುಸ್ತಕ ಹಿಡಿಯುವತ್ತ ಕೊಂಡೊಯ್ಯುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ. ಇಂತಹ ಇನ್ನಷ್ಟು ಕಾರ್ಯಕ್ರಮಗಳು ಮೂಡಿಬರಲಿ” ಎಂದು ಶುಭ ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ “ಸಾಹಿತ್ಯವನ್ನು ಗ್ರಾಮಗ್ರಾಮಗಳಲ್ಲಿ ಹಂಚುವ ಕಾರ್ಯ ಶ್ಲಾಘನೀಯ.ಇದರಿಂದ ಪರಸ್ಪರ ಪರಿಚಯದ ಜೊತೆಗೆ ಬಂಧುತ್ವ ಬೆಳೆಯುತ್ತದೆ. ಜೊತೆಯಲ್ಲಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯೂ ಬೆಳೆಯಲಿದೆ” ಎಂದು ಹಾರೈಸಿದರು.

ಸರ್ವಾಧ್ಯಕ್ಷತೆಯನ್ನು ವಹಿಸಿದ್ದ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪೂರ್ಣಶ್ರೀ ಮಾತನಾಡಿ, ಮಕ್ಕಳಲ್ಲಿ ಬರೆಯುವ ಚಿಂತನೆ ಮೂಡಿಸುವುದರ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ. ಇಂದಿನ ಕಾರ್ಯಕ್ರಮವೂ ಯಶಸ್ವಿಯಾಗಿ ಸಾಕಾರಗೊಂಡಿದೆಯೆಂದರು

ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಬಪ್ಪಳಿಗೆ ವಿದ್ಯಾರ್ಥಿನಿ ಕುಮಾರಿ ಫಾತಿಮತ್ ಶಿಫಾನ ಸಮಾರೋಪದ ನುಡಿಗಳನ್ನಾಡಿ, ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರ ಭಾಗವಹಿಸುವಿಕೆಯೇ ಕಾರಣ.ಇಂತಹ ಕಾರ್ಯಕ್ರಮಗಳಿಂದ ಇದು ಸಾಧ್ಯವಾಗಿದೆ. ಸಾಂಕೇತಿಕ ಕವಿಗೋಷ್ಠಿಯ ಜೊತೆಗೆ ಉತ್ತಮವಾದ ಸಮಾರಂಭವಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, “ಪ್ರತಿಯೊಬ್ಬರ ಕೈಜೋಡಿಸುವಿಕೆಯಿಂದ 32 ಗ್ರಾಮಗಳಲ್ಲಿ ಸಂಭ್ರಮದಿಂದ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮಗಳು ನಡೆದು ಯಶಸ್ವಿಯಾಗಲು ಸಾಧ್ಯವಾಯಿತು. ವಿದ್ಯಾರ್ಥಿಗಳಿಗೆ ಸಾಹಿತ್ಯ ವೇದಿಕೆಯನ್ನು ಕಲ್ಪಿಸಬೇಕು, ಅವರನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳಬೇಕು ಎಂಬುದು ನಮ್ಮ ಧ್ಯೇಯವಾಗಿತ್ತು. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಬಹಳ ಸಂತೋಷವಾಗಿದೆ. ಸಹಕರಿಸಿದ ಪ್ರತಿಯೊಬ್ಬರಿಗೂ ವಂದನೆಗಳು” ಎಂದು ಹೇಳಿದರು.ಸಮಾರಂಭದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಶಾಲಿನಿ ಬಿ ಶೆಟ್ಟಿ, ಉದಯೋನ್ಮುಖ ಕವಯತ್ರಿ ಮಂಜುಳಾ ಮುರಳೀಕೃಷ್ಣ ಹಸಂತಡ್ಕ, ಮೊರಾರ್ಜಿ ದೇಸಾಯಿ ಪ ಪೂ ಕಾಲೇಜಿನ ಪೋಷಕ ಸಮಿತಿ ಅಧ್ಯಕ್ಷರಾದ ಶ್ರೀ ಯಶೋಧರ, ಶ್ರೀ ರಜಾಕ್ ಬಪ್ಪಳಿಗೆ, ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷರಾದ ಡಾ. ಹರ್ಷ ಕುಮಾರ್ ರೈ ಮಾಡಾವು,ಮೊರಾರ್ಜಿ ದೇಸಾಯಿ ಕಾಲೇಜು ಕನ್ನಡ ಉಪನ್ಯಾಸಕರಾದ ಶ್ರೀ ಐತಪ್ಪ ಉಪಸ್ಥಿತರಿದ್ದರು.

6,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಹಿತ್ಯ ವೇದಿಕೆ

ಕಳೆದ ಐದು ವರ್ಷಗಳಲ್ಲಿ ಪುತ್ತೂರು ತಾಲೂಕಿನ 32 ಗ್ರಾಮಗಳಲ್ಲಿ ನಡೆದ ಗ್ರಾಮ ಸಾಹಿತ್ಯ ಸಂಭ್ರಮದ ಮೂಲಕ 6,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ವೇದಿಕೆ ಕಲ್ಪಿಸಲಾಗಿದೆ. ಕವಿಗೋಷ್ಠಿ, ಕಥಾಗೋಷ್ಠಿ, ಪ್ರವಾಸ ಕಥನ, ‘ನನ್ನ ನೆಚ್ಚಿನ ಶಿಕ್ಷಕ/ಶಿಕ್ಷಕಿ’, ‘ನನ್ನ ಆಪ್ತಮಿತ್ರ’ ಸೇರಿದಂತೆ ವಿವಿಧ ಸಾಹಿತ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಈ ಅಭಿಯಾನದಲ್ಲಿ 133ಕ್ಕೂ ಅಧಿಕ ಶಾಲಾ-ಕಾಲೇಜುಗಳು ಭಾಗವಹಿಸಿದ್ದು, ಗ್ರಾಮಗಳ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 200ಕ್ಕೂ ಅಧಿಕ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ. ಗ್ರಾಮಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಸಾಹಿತ್ಯದೊಂದಿಗೆ ನಿರಂತರವಾಗಿ ಬೆಸೆಯುವ ಈ ಪ್ರಯೋಗವು ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮ ಹಾಗೂ ಅನುಕರಣೀಯ ಪ್ರಯತ್ನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಲ್ನಾಡಿನ 22 ಸಾಧಕರಿಗೆ ಗೌರವ

22ನೇ ಸರಣಿ ಕಾರ್ಯಕ್ರಮದ ಈ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಲ್ನಾಡು ಗ್ರಾಮದ 22 ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸುರೇಶ್ ಬಲ್ನಾಡು – ಕೃಷಿ ಸಂಶೋಧನಾ ಕ್ಷೇತ್ರ,
ಸಫಿಯಾ ಬಲ್ನಾಡು – ನಾಟಿ ವೈದ್ಯಕೀಯ ಕ್ಷೇತ್ರ,
ಸೀತು – ಹಿರಿಯ ಸೂಲಗಿತ್ತಿ ಹಾಗೂ ನಾಟಿ ವೈದ್ಯಕೀಯ ಕ್ಷೇತ್ರ,
ಪರಮೇಶ್ವರ ಗೌಡ ಕಟ್ಟಿಮನೆ – ದೈವಾರಾಧನಾ ಕ್ಷೇತ್ರ,
ಶರತ್ ಆಳ್ವ ಚನಿಲ – ಕಲೆ ಮತ್ತು ಸಾಹಿತ್ಯ ಕ್ಷೇತ್ರ,
ಗಣೇಶ್ ಪಾಲೆಚ್ಚಾರು – ಯಕ್ಷಗಾನ ಕ್ಷೇತ್ರ,
ಎ. ಅಂಬ್ರೋಸ್ ಡಿ. ಸೋಜ – ಶ್ವಾನ ಸಂರಕ್ಷಣೆ ಹಾಗೂ ಹೈನುಗಾರಿಕೆ ಕ್ಷೇತ್ರ,
ಕು. ನಂದಿತಾ ಕೂಟೇಲು – ಯಕ್ಷಗಾನ ಕ್ಷೇತ್ರ,
ಚಿದಾನಂದ ಬೈಲಾಡಿ – ಕಾನೂನು ಸೇವಾ ಕ್ಷೇತ್ರ,
ಪ್ರಕಾಶ್ ಕೆಲ್ಲಾಡಿ – ಸಮಾಜ ಸೇವಾ ಕ್ಷೇತ್ರ,
ಮಾಧವ ಗೌಡ ಕಾಂತಿಲ – ಸಾಮಾಜಿಕ ಕ್ಷೇತ್ರ,
ಶೃತಿ ಬಲ್ನಾಡು – ಯಕ್ಷಗಾನ ಕ್ಷೇತ್ರ,
ಶೀನಪ್ಪ ಗೌಡ – ದೇಶ ಸೇವಾ ಕ್ಷೇತ್ರ,
ಸತೀಶ್ ಗೌಡ – ಕೃಷಿ ಕ್ಷೇತ್ರ,
ಪ್ರಸನ್ನ ಭಟ್ ಎನ್. ಬಲ್ನಾಡು – ನಿರ್ಮಾಣ ತಾಂತ್ರಿಕ ಕ್ಷೇತ್ರ,
ಪರಮೇಶ್ವರಿ ಬಬ್ಬಿಲಿ – ಸಾಮಾಜಿಕ ಕ್ಷೇತ್ರ,
ಕುಸುಮಾಧರ್ ಎಸ್.ಕೆ. – ಸಹಕಾರ ಕ್ಷೇತ್ರ,
ಡಾ. ಅನುಪಮಾ ರವಿ ಡಿ. – ವೈದ್ಯಕೀಯ ಕ್ಷೇತ್ರ,
ಸುಂದರ ಸಾರ್ಯ – ಸಾಹಿತ್ಯ ಕ್ಷೇತ್ರ,

ಕುಟ್ಟಿ ನಲಿಕೆ – ನಲಿಕೆ ಕಲಾ ಪರಂಪರೆ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಅಲ್ಲದೆ ಸಂಸಾರ ಕಲಾವಿದೆರ್, ಬಲ್ನಾಡ್ ಕಲಾತಂಡ ಹಾಗೂ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.), ಬಲ್ನಾಡು ಸಂಘ-ಸಂಸ್ಥೆ ವಿಭಾಗದ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ಪುರಸ್ಕರಿಸಲಾಯಿತು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರಿನ ಮಾಜಿ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಸಾಧಕರನ್ನು ಅಭಿನಂದಿಸಿ ಅಭಿನಂದನಾ ನುಡಿಗಳನ್ನಾಡಿದರು.

ಸಾಧಕರ ಸನ್ಮಾನ ಸಂದರ್ಭದಲ್ಲಿ ಸಾಹಿತ್ಯ ಸೇವಕರಾದ ಅಶ್ವಿಜ ಶ್ರೀಧರ್, ಬೆಳ್ತಂಗಡಿ; ಸುಪ್ರೀತಾ ಚರಣ್ ಪಾಲಪ್ಪೆ, ಕಡಬ, ಅಪೂರ್ವ ಕಾರಂತ್,ದರ್ಬೆ ದಿವ್ಯ ರೈ ಪೆರುವಾಜೆ, ಪೂರ್ಣಿಮಾ ಸಾಲೆತ್ತೂರು ವಿಂಧ್ಯಾ ಎಸ್. ರೈ ಕಡೇಶಿವಾಲಯ, ಎಂ. ಮನ್ಮಥ ಆಚಾರ್ಯ ಕಡಬ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಮೋಹಿತಾ ಹೊಸ್ಮಠ ಹಾಗೂ ಸುನೀತಾ ಶ್ರೀರಾಮ್ ಕೊಯಿಲರವರು ಸನ್ಮಾನ ಪತ್ರಗಳನ್ನು ವಾಚಿಸಿ ಸಾಧಕರನ್ನು ಗೌರವಿಸಿದರು.

‘ಕನ್ನಡದಲ್ಲೂ ಐಎಎಸ್ ಬರೆಯಿರಿ’ ಅಭಿಯಾನ

ಗ್ರಾಮ ಸಾಹಿತ್ಯ ಸಂಭ್ರಮದ ಜೊತೆಗೆ ಕಳೆದ ಐದು ವರ್ಷಗಳಿಂದ ‘ಕನ್ನಡದಲ್ಲೂ ಐಎಎಸ್ ಬರೆಯಿರಿ’ ಅಭಿಯಾನವನ್ನೂ ನಡೆಸಿಕೊಂಡು ಬರಲಾಗಿದ್ದು, ತಾಲೂಕಿನ 50,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಲ್ನಾಡು ಗ್ರಾಮ ಪಂಚಾಯಿತಿಯ ವತಿಯಿಂದ ಸಿಹಿ ತಿಂಡಿ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅರುಣ್ ನಾಯ್ಕ್ ಸ್ವಾಗತಿಸಿ, ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಪ. ಪೂ. ಕಾಲೇಜು ವಿದ್ಯಾರ್ಥಿಗಳು ನಾಡಗೀತೆ ಹಾಗೂ ಪ್ರಾರ್ಥನೆ ಹಾಡಿದರು . ಜಗದೀಶ್ ಬಾರಿಕೆ, ಹರ್ಷಿತ ಪಿ. ಕಡೇಶಿವಾಲಯ ಹಾಗೂ ನಮಿತಮಣಿ ಪಡ್ಡಾಯೂರು ಕಾರ್ಯಕ್ರಮ ನಿರೂಪಿಸಿದರು. ಸುಪ್ರಿತಾ ಚರಣ್ ಪಾಲಪ್ಪೆ ವಂದಿಸಿದರು.

‘ಪ್ರತಿಯೊಬ್ಬ ಮಗುವಿನೊಳಗೂ ಒಬ್ಬ ಸೃಜನಶೀಲ ಲೇಖಕ ಅಡಗಿರುತ್ತಾನೆ; ಅವನಿಗೆ ಬರೆಯಲು ಒಂದು ಅವಕಾಶ ನೀಡುವುದು ನಮ್ಮ ಕರ್ತವ್ಯ’ ಎಂಬ ಆಶಯದೊಂದಿಗೆ ಸಾಗಿದ ಗ್ರಾಮ ಸಾಹಿತ್ಯ ಸಂಭ್ರಮವು ಬಲ್ನಾಡಿನಲ್ಲಿ 22ನೇ ಸರಣಿಯೊಂದಿಗೆ ಸಮಾರೋಪಗೊಂಡು, ಪುತ್ತೂರು ತಾಲೂಕಿನ 32 ಗ್ರಾಮಗಳ ಐದು ವರ್ಷದ ಸಾಹಿತ್ಯ ಪಯಣಕ್ಕೆ ಸಾರ್ಥಕ ತೆರೆ ಎಳೆಯಿತು.

ವರದಿ :ಅಶ್ವಿಜ ಶ್ರೀಧರ್ ಬೆಳ್ತಂಗಡಿ