ವಿವಿ ತುಳುಪೀಠದ ಪ್ರಚಾರೋಪನ್ಯಾಸ

0
19

ತುಳುನಾಡಿನ ಮೂಲ ಕಸುಬು ‘ಕೃಷಿ’: ವಿಜಯಲಕ್ಷ್ಮೀ ಕಟೀಲು

ಮಂಗಳೂರು : ತುಳುನಾಡಿನಲ್ಲಿ ಹುಟ್ಟಿದವರು, ಇಲ್ಲಿಗೆ ವಲಸೆ ಬಂದವರೂ ಹೆಚ್ಚಾಗಿ ಅವಲಂಬಿತರಾದದ್ದು ಕೃಷಿಯನ್ನು. ಇಲ್ಲಿಯ ಹಬ್ಬ,ಆಚರಣೆಗಳಲ್ಲಿ ಕೃಷಿಯ ಸತ್ವವನ್ನು ಕಾಣಬಹುದು. ಆದ್ದರಿಂದಲೇ ತುಳುನಾಡಿನ ಮೂಲ ಕಸುಬು ‘ಕೃಷಿ’ ಎಂದು ಶಿಕ್ಷಕರು, ಲೇಖಕರಾದ ವಿಜಯಲಕ್ಷ್ಮೀ ಕಟೀಲ್ ನುಡಿದರು.

ಅವರು ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ವತಿಯಿಂದ ಶ್ರೀನಿವಾಸ ಮಹಾವಿದ್ಯಾಲಯ, ಶಿಕ್ಷಕ-ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ನಡೆದ ಪ್ರಚಾರೋಪನ್ಯಾಸ ಮಾಲಿಕೆಯ ಎಗ್ಗೆ-3 ‘ತುಳುವೆರೆ ಕಸುಬುಲು’ ಎಂಬ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.

ತುಳುನಾಡಿನ ಕಸುಬುಗಳನ್ನು ಧಾರ್ಮಿಕ, ಸಾಮಾಜಿಕ ಮತ್ತು ಕುಲ ಹೀಗೆ ಮೂರು ಬಗೆಗಳಲ್ಲಿ ವಿಂಗಡಿಸಬಹುದು. ಇಲ್ಲಿನ ಮೂಲ ನಿವಾಸಿಗಳಾದ ಕೊರಗರು ಕಾಡಿನ ಬಳ್ಳಿ, ಬೇರುಗಳಿಂದ ಮಾಡುತ್ತಿದ್ದ ಕುರ್ವೆ, ಪುಡಾಯಿ, ಬಟ್ಟಿ ಜನರ ಬಳಕೆಯಿಂದ ಕಣ್ಮರೆಯಾಗಿ ವಸ್ತು ಸಂಗ್ರಹಾಲಯಗಳಿಗೆ, ಉತ್ಸವಗಳಿಗೆ ಆಕರ್ಷಣೆಯ ವಸ್ತುಗಳಾಗಿ ಬಳಕೆಯಾಗುತ್ತಿದೆ. ಮಣ್ಣಿನ ವಸ್ತುಗಳು, ಮೀನುಗಾರಿಗೆ, ಮನೆ ಮದ್ದು, ನೇಕಾರಿಕೆ, ಮೂರ್ತೆಗಾರಿಕೆ, ಬೀಡಿ, ಆಚಾರಿಕೆ, ದೈವಾರಾಧನೆಯ ಕೆಲಸ ಹೀಗೆ ತುಳುವರು ಬೇರೆ ಬೇರೆ ಕಸುಬುಗಳಿಂದ ಬದುಕು ಕಟ್ಟಿಕೊಂಡವರು. ತುಳು ತಾಯಿ ಭಾಷೆ ಅಲ್ಲದ, ಈ ಮಣ್ಣಿನ ಮುಸ್ಲಿಂ ಬಾಂಧವರು ದೇವಸ್ಥಾನಗಳ ಜಾತ್ರೆಗಳಿಗೆ ಸಿಡಿಮದ್ದು ತಯಾರಿಸಿ ಕೊಡುವ ಕಸುಬುಗಳನ್ನು ಮಾಡಿಕೊಂಡಿದ್ದರು. ಈಗಲೂ ಕೆಲವು ದೇವಸ್ಥಾನಗಳಲ್ಲಿ ಅದನ್ನು ಮುಂದುವರಿಸಿಕೊಂಡು ಬಂದಿರುವುದು ತುಳುನಾಡಿನ ಸತ್ವವನ್ನು ಉಳಿಸಿಕೊಂಡಂತಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಶಿಕ್ಷಕ-ಶಿಕ್ಷಣ ಸಂಸ್ಥೆಯ ಡೀನ್ ಆಗಿರುವ ಡಾ.ಪದ್ಮನಾಭ ಸಿ.ಎಚ್ ಮಾತನಾಡಿ, ಜೀವನಾಧಾರಕ್ಕೆ ಬೇಕಾದ ಜ್ಞಾನ ತುಳುವರಲ್ಲಿತ್ತು. ತಾವು ಮಾಡುತ್ತಿದ್ದ ಕಸುಬುಗಳಲ್ಲಿ ಬಳಸುತ್ತಿದ್ದ ಜ್ಞಾನ, ಇಂದಿನ ತಂತ್ರಜ್ಞಾನಕ್ಕೆ ತಳಹದಿಯಾಗಿದೆ. ಇಲ್ಲಿನ ಕಸುಬುಗಳಲ್ಲಿ ಹೆಚ್ಚಿನವುಗಳನ್ನು ಕೆಲವೊಂದು ಸಮುದಾಯಗಳು ಇಂದಿನವರೆಗೂ ಕಾಪಾಡಿಕೊಂಡು ಬಂದಿರುತ್ತವೆ ಎಂದರು.

ತುಳು ಪೀಠದ ಸಹಾಯಕರಾದ ಪ್ರಸಾದ್ ಅಂಚನ್ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ನಮ್ಮ ಹಿರಿಯರು ಕಟ್ಟಿರುವ ಕಸುಬುಗಳು, ನಮ್ಮ ಅನಿವಾರ್ಯತೆಗೆ ತಕ್ಕಂತೆ ಬದಲಾಗಿವೆ. ನಮ್ಮ ಬದುಕು ಯಾಂತ್ರಿಕತೆಗೆ ಸಾಗಿದೆ. ಆದರೆ ಅದು ನಮ್ಮ ಆರಾಧನೆ, ನಂಬಿಕೆಗೆ ಅಡ್ಡಿಯಾಗದಂತೆ ಕಾಪಾಡುವುದು ನಮ್ಮ ಜವಾಬ್ದಾರಿ ಎಂದರು.
ಶಿಕ್ಷಕ-ಶಿಕ್ಷಣ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಅನಿತ ಸಿ.ಎಚ್. ಉಪಸ್ಥಿತರಿದ್ದರು. ಪ್ರಥಮ ಬಿ.ಎಡ್. ವಿದ್ಯಾರ್ಥಿನಿ ಸ್ವಪ್ನ ನಿರೂಪಿಸಿದರು. ಚೇತನ್ ವಂದಿಸಿದರು.