ಸಮಾಜಸೇವಕ ಸತೀಶ್ ಸಾಲ್ಯಾನ್ ಅವರಿಗೆ ‘ಮಾನ್ಯ ಸೇವಾ ರತ್ನ’ ಪ್ರಶಸ್ತಿ ಪ್ರದಾನ

0
39

ಮಸ್ಕತ್ : ಸಮಾಜಸೇವೆ, ತುರ್ತು ಸಂದರ್ಭಗಳಲ್ಲಿ ರಕ್ತದ ವ್ಯವಸ್ಥೆ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳ ಆಯೋಜನೆಯ ಮೂಲಕ ಮಾನವೀಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸಮಾಜಸೇವಕ ಸತೀಶ್ ಸಾಲ್ಯಾನ್ ಅವರಿಗೆ ಮಸ್ಕತ್‌ನಲ್ಲಿ ‘ಮಾನ್ಯ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಸ್ಕತ್‌ನಲ್ಲಿ ಆಯೋಜಿಸಲಾಗಿದ್ದ 10ನೇ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಅಂಗವಾಗಿ ಆಗಮಿಸಿದ್ದ ಸತೀಶ್ ಸಲ್ಯಾನ್ ಅವರನ್ನು, ರಕ್ತದಾನದ ಕ್ಷೇತ್ರದಲ್ಲಿ ಅವರು ಸಲ್ಲಿಸುತ್ತಿರುವ ಸೇವೆ ಹಾಗೂ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ರೋಗಿಗಳಿಗೆ ರಕ್ತ ಪೂರೈಕೆಗೆ ನೆರವಾಗುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಮಾನ್ಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರತಿಷ್ಠಾನ ವತಿಯಿಂದ ಈ ಗೌರವಕ್ಕೆ ಆಯ್ಕೆ ಮಾಡಲಾಗಿತ್ತು.

ರಕ್ತದಾನ ಶಿಬಿರದ ಬಳಿಕ ಮಸ್ಕತ್‌ನ ಓಂಕಾರ ವೇದಿಕೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಸತೀಶ್ ಸಾಲ್ಯಾನ್ ಅವರಿಗೆ ‘ಮಾನ್ಯ ಸೇವಾ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಿ, ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಶಶಿಧರ ಶೆಟ್ಟಿ ಮಲ್ಲರ್, ಡಾ. ಅಂಚನ್ ಸಿ.ಕೆ., ಗಣೇಶ್ ಶೆಟ್ಟಿ, ಮಂಜುನಾಥ ಕಾಮತ್, ಯುವರಾಜ್ ಸಲ್ಯಾನ್, ಓಂಕಾರ ಮಸ್ಕತ್‌ನ ಸದಸ್ಯರು ಹಾಗೂ ಮಾನ್ಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರತಿಷ್ಠಾನ ಮತ್ತು ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್–ಓಮಾನ್ ಘಟಕದ ಅಧ್ಯಕ್ಷ ಶಿವಾನಂದ ಕೋಟ್ಯಾನ್ ಕಟಪಾಡಿ ಉಪಸ್ಥಿತರಿದ್ದರು.

ಗೌರವ ಸ್ವೀಕರಿಸಿದ ಸತೀಶ್ ಸಾಲ್ಯಾನ್ ಅವರು, ರಕ್ತದಾನವು ಕೇವಲ ದಾನವಲ್ಲ ; ಸಂಕಷ್ಟದಲ್ಲಿರುವ ಜೀವಕ್ಕೆ ನೀಡುವ ಅಮೂಲ್ಯ ನೆರವು ಎಂಬ ಸಂದೇಶದೊಂದಿಗೆ, ತುರ್ತು ರಕ್ತದ ಅವಶ್ಯಕತೆ ಇರುವವರಿಗೆ ನೆರವಾಗುವುದು ಹಾಗೂ ಸ್ವಯಂಪ್ರೇರಿತ ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಓಂಕಾರ ಮಸ್ಕತ್ ವತಿಯಿಂದ ಖ್ಯಾತ ಗಾಯಕ ಪುತ್ತೂರು ಜಗದೀಶ್ ಆಚಾರ್ಯ ಅವರ ಭಕ್ತಿಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಕ್ತಿಗೀತೆಗಳ ಗಾಯನವು ಸಭಾಂಗಣದಲ್ಲಿ ಭಕ್ತಿಭಾವದ ವಾತಾವರಣ ಮೂಡಿಸಿ, ನೆರೆದಿದ್ದ ಸಂಗೀತಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಸಮಾಜಸೇವೆ ಮತ್ತು ರಕ್ತದಾನದಂತಹ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡ ಸಾಧಕರನ್ನು ಸಾಂಸ್ಕೃತಿಕ ವೇದಿಕೆಯಲ್ಲಿ ಗುರುತಿಸಿ ಗೌರವಿಸಿದ ಈ ಕಾರ್ಯಕ್ರಮವು ವಿಶೇಷ ಅರ್ಥಪೂರ್ಣ ಕ್ಷಣವಾಗಿ ಮೂಡಿಬಂತು.