ಬೆಳ್ತಂಗಡಿ: ತಾಲೂಕಿನ ನಾವೂರಿನಲ್ಲಿ ತಡರಾತ್ರಿ ಆರೋಗ್ಯ ಕ್ಲಿನಿಕ್‌ವೊಂದಕ್ಕೆ ಡೀಸೆಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ಕಿಟಕಿಯ ಮೂಲಕ ಕ್ಲಿನಿಕ್‌ನ ಒಳಭಾಗಕ್ಕೆ ಡೀಸೆಲ್ ಸುರಿದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ನಾವೂರಿನ ಸ್ಥಳೀಯ ಆರೋಗ್ಯ ಕ್ಲಿನಿಕ್ ಕಟ್ಟಡಕ್ಕೆ ಸೇರಿದ ಕಿಟಕಿಯೊಂದರ ಮೂಲಕ ಒಳಗೆ ಡೀಸೆಲ್ ಸುರಿದು ಬೆಂಕಿ ಹಚ್ಚಲಾಗಿದ್ದು, ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಟ್ಟಡವು ತನುಜಾ ಶೇಖರ್ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.
ಘಟನೆ ಗಮನಕ್ಕೆ ಬಂದ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಕ್ಲಿನಿಕ್‌ನ ಒಳಭಾಗಕ್ಕೆ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಘಟನೆಯ ಹಿಂದೆ ಯಾರ ಕೈವಾಡವಿದೆ ಹಾಗೂ ಕೃತ್ಯದ ಉದ್ದೇಶವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

