ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು ಇದರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ, ಕೇರಳ-ಕರ್ನಾಟಕ ಉತ್ಸವ ಹಾಗೂ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವವು ನವೆಂಬರ್ 28 ಮತ್ತು 29ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಲಿದೆ.
ಸಮ್ಮೇಳನದ ಅಂಗವಾಗಿ ಅಂತರರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ, ಮಕ್ಕಳ ಕವಿಗೋಷ್ಠಿ, ಜಾನಪದ ಗೋಷ್ಠಿ ಹಾಗೂ ಮಾಧ್ಯಮ ಗೋಷ್ಠಿ ನಡೆಯಲಿದೆ. ಗಡಿನಾಡು-ಹೊರನಾಡು ಹಾಗೂ ಅನಿವಾಸಿ ಭಾರತೀಯ ಕನ್ನಡಿಗರು ಮತ್ತು ಕನ್ನಡ ಸಂಘಟನೆಗಳ ಭಾಷಾ ಬಾಂಧವ್ಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವೂ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಸುಮಾರು 200 ಮಂದಿ ಕಲಾವಿದರು ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದು, 8 ರಾಜ್ಯಗಳಿಂದ ಸುಮಾರು 300 ಮಂದಿ ಸಾಂಸ್ಕೃತಿಕ ರಾಯಭಾರಿಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಕೇರಳ ಮತ್ತು ಕರ್ನಾಟಕದ ಕವಿಗಳು, ಸಾಹಿತಿಗಳು, ಲೇಖಕರು, ಕಲಾವಿದರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಅಂಚೆ ಮೂಲಕ ಕಳುಹಿಸುವ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಹಾಗೂ ವಿಶೇಷವಾಗಿ ಕಾಸರಗೋಡು ಜಿಲ್ಲೆಯ ಕನ್ನಡ, ತುಳು ಮತ್ತು ಬಹುಭಾಷಾ ಸಂಘಟನೆಗಳು, ಸಾಹಿತಿಗಳು, ಕವಿಗಳು, ಕಲಾವಿದರು, ಲೇಖಕರು, ಮಾಧ್ಯಮ ಪ್ರತಿನಿಧಿಗಳು, ಸಾಮಾಜಿಕ ಜಾಲತಾಣ ನಿರ್ವಾಹಕರು ಹಾಗೂ ದೇಶ-ವಿದೇಶಗಳಲ್ಲಿ ನೆಲೆಸಿರುವ ಕಾಸರಗೋಡು ಮೂಲದವರ ಹೆಸರು, ಪೂರ್ಣ ವಿಳಾಸ, ಮೊಬೈಲ್ ಹಾಗೂ ವಾಟ್ಸಪ್ ಸಂಖ್ಯೆಯನ್ನು ಕಳುಹಿಸುವಂತೆ ಪ್ರತಿಷ್ಠಾನ ಮನವಿ ಮಾಡಿದೆ.
ಅದೇ ರೀತಿ ಕೇರಳ ರಾಜ್ಯದ ಕನ್ನಡ, ತುಳು ಹಾಗೂ ವಿವಿಧ ಭಾಷಾ ಸಮುದಾಯಗಳ ಸಂಘ-ಸಂಸ್ಥೆಗಳ ವಿಳಾಸದ ಡೈರೆಕ್ಟರಿಯ ಎರಡನೇ ಪರಿಷ್ಕೃತ ಆವೃತ್ತಿಯನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಸುಮಾರು 500 ಸಂಘ-ಸಂಸ್ಥೆಗಳು, ಭಜನಾ ಸಂಘ-ಮಂಡಳಿಗಳು, ಭಜನಾ ಮಂದಿರಗಳು ಹಾಗೂ ಸುಮಾರು 200 ಸರ್ಕಾರಿ ಮತ್ತು ಖಾಸಗಿ ಕನ್ನಡ ಶಾಲಾ-ಕಾಲೇಜುಗಳ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.
ಸಂಸ್ಥೆಗಳ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಇ-ಮೇಲ್, ಸ್ಥಾಪನೆಯಾದ ವರ್ಷ, ಸಂಕ್ಷಿಪ್ತ ಪರಿಚಯ ಹಾಗೂ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಸೇರಿದಂತೆ ಪದಾಧಿಕಾರಿಗಳ ವಿವರಗಳನ್ನು ಕಳುಹಿಸುವಂತೆ ಕೋರಲಾಗಿದೆ.
ಸಮ್ಮೇಳನದ ಪ್ರತಿನಿಧಿಗಳಾಗಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ ಕಳುಹಿಸಬಹುದು. ಕೇರಳ, ಕರ್ನಾಟಕ ಹಾಗೂ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪತ್ರಕರ್ತರು ಹಾಗೂ ಮಾಧ್ಯಮ ಪ್ರತಿನಿಧಿಗಳ ವಿವರಗಳನ್ನೂ ಸಂಗ್ರಹಿಸಲಾಗುತ್ತಿದೆ.
ವಿವರಗಳನ್ನು ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಮೀಪುಗುರಿ-ಪಾರೆಕಟ್ಟೆ ರಸ್ತೆ, ಕಾಸರಗೋಡು–671121 ಇವರಿಗೆ ಕಳುಹಿಸಬಹುದು. ವಾಟ್ಸಪ್ ಸಂಪರ್ಕ: 9448572016, 9901951965.
— ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು
