ಬಂಟ್ವಾಳ : ಅರ್ಹ ಮತದಾರರ ಹೆಸರು ಅಳಿಸುವ ಹುನ್ನಾರಸುಳ್ಳು ಅರ್ಜಿದಾರರ ವಿರುದ್ಧ ಕ್ರೆಮಕ್ಕೆ ರೈ ಆಗ್ರಹ

0
8

ಬಂಟ್ವಾಳ : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹಿನ್ನೆಲೆಯಲ್ಲಿ ಅರ್ಹ ಮತದಾರರ ಹೆಸರು ಅಳಿಸುವುದಕ್ಕಾಗಿ ಅರ್ಜಿ ಫಾರಂ 7ರಲ್ಲಿ ಸುಳ್ಳು ಅರ್ಜಿ ಸಲ್ಲಿಸುವವರ ವಿರುದ್ಧ ತಾಲ್ಲೂಕು ಚುನಾವಣಾಧಿಕಾರಿಯಾಗಿ ತಹಶೀಲ್ದಾರರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ.

ಇಲ್ಲಿನ ಬಿ.ಸಿ.ರೋಡು ಆಡಳಿತ ಸೌಧದಲ್ಲಿ ಈ ಬಗ್ಗೆ ಕಾಂಗ್ರೆಸ್ ನಿಯೋಗ ತಹಶೀಲ್ದಾರ್ ಮಂಜುನಾಥ್ ಇವರಿಗೆ ಮಂಗಳವಾರ ಮನವಿ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಹಿಂದೆ ಪಶ್ಚಿಮ ಬಂಗಾಲದಲ್ಲಿ ಬಾಂಗ್ಲಾ ವಲಸಿಗರ ನೆಪದಲ್ಲಿ ಮತದಾರರ ಹೆಸರು ಅಳಿಸಿದ್ದರೆ, ಇಲ್ಲಿ ಅಂತಹ ಸಮಸ್ಯೆ ಇಲ್ಲ. ಇದಕ್ಕೆ ಬದಲಾಗಿ ‘ಯಾವುದೇ ಪಕ್ಷದ ಅರ್ಹ ಮತದಾರರ ಹೆಸರು ಅಳಿಸಿ ಹಾಕುವುದು ಎಂದರೆ ಅವರನ್ನು ಜೀವಂತ ಸಾಯಿಸಿದಂತೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾಣಿ ಗ್ರಾಮದ ವಿವಿಧ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರು ಅಳಿಸುವಂತೆ ಅರ್ಜಿ ಸಲ್ಲಿಕೆಯಾಗಿದ್ದು, ಮತದಾರರು ತಮ್ಮ ವಿಳಾಸದಲ್ಲಿ ವಾಸವಾಗಿಲ್ಲ ಅಥವಾ ಸ್ಥಳಾಂತರಗೊAಡಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಕೆಯಾಗಿವೆ. ಈ ಅರ್ಜಿಗಳ ಮಾಹಿತಿ ವಾಸ್ತವಾಂಶಕ್ಕೆ ವಿರುದ್ಧವಾಗಿದ್ದು, ಇದರಿಂದಾಗಿ ಅರ್ಹ ಮತದಾರರ ಹಕ್ಕಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ತಹಶೀಲ್ದಾರ್ ಅವರು ನಿರ್ದಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರು ಅಳಿಸಲು ಸುಳ್ಳು ಮತ್ತು ಆಧಾರರಹಿತ ಅರ್ಜಿ ಸಲ್ಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಪ್ರತಿಯೊಬ್ಬ ಅರ್ಹ ಮತದಾರನಿಗೂ ತನ್ನ ಮತದಾನದ ಹಕ್ಕು ದೊರೆಯುವಂತೆ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ, ಪ್ರಮುಖರಾದ ಚಂದ್ರಪ್ರಕಾಶ ಶೆಟ್ಟಿ, ಪಿಯೂಸ್ ಎಲ್.ರಾಡ್ರಿಗಸ್, ಬಿ.ಪದ್ಮಶೇಖರ ಜೈನ್, ಬೇಬಿ ಕುಂದರ್, ಸುದರ್ಶನ್ ಜೈನ್, ಕೆ.ಪದ್ಮನಾಭ ರೈ, ಸುದೀಪ್ ಕುಮಾರ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಅಬ್ಬಾಸ್ ಆಲಿ, ಸದಾಶಿವ ಬಂಗೇರ, ಕೆ.ಸಂಜೀವ ಪೂಜಾರಿ, ಮಹಮ್ಮದ್ ಶರೀಫ್, ಜಯಂತಿ ಪೂಜಾರಿ, ಐಡಾ ಸುರೇಶ್, ಉಮೇಶ್ ಬೋಳಂತೂರು, ನವಾಝ್ ಬಡಕಬೈಲು, ಸಿದ್ದಿಕ್ ಗುಡ್ಡೆಯಂಗಡಿ, ಆಲ್ಬಟ್ ð ಮಿನೇಜಸ್, ಮಹಮ್ಮದ್ ನಂದಾವರ, ಸುರೇಶ್ ಕುಲಾಲ್ ನಾವೂರು, ಸುಧಾಕರ ಶೆಣೈ ಕಂಡಿಗ, ಜಗದೀಶ ಕುಂದರ್ ಮತ್ತಿತರರು ಇದ್ದರು.