ಬಂಟ್ವಾಳ : ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರನ್ನು ಕಡೆಗಣಿಸಿ ದರ್ಬಾರ್ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಅನುಭವಿಸಿದ್ದಾರೆ. ಇಲ್ಲಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕೆಲವೊಂದು ಗ್ರಾಮಗಳ ಅಂತರದಲ್ಲಿ ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಗ್ರಾಮೀಣ ಭಾಗದ ಬಹುತೇಕ ರೈತರಿಗೆ ಭಾರೀ ತಾರತಮ್ಯ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ತುAಗಪ್ಪ ಬಂಗೇರ ಆರೋಪಿಸಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ”ಪ್ರಜಾಸೇವೆ ಆಂದೋಲನ’ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿರುವ ರಾಜ್ಯ ಸರ್ಕಾರ ರಸ್ತೆ ಹೊಂಡ ಮುಚ್ಚುವುದರ ಜೊತೆಗೆ ಕನಿಷ್ಟ ಕೃಷಿ ಹೊಂಡ ಮತ್ತು ಕಿಂಡಿ ಅಣೆಕಟ್ಟೆ ರಚಿಸುವುದಕ್ಕೂ ಅನುದಾನ ಇಲ್ಲದೆ ಕಂಗೆಟ್ಟಿದೆ’ ಎಂದರು. ಪುಂಜಾಲಕಟ್ಟೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ವಸತಿ ಶಾಲೆಗೆ 15 ಎಕರೆ ಜಮೀನು ಮಂಜೂರಾಗಿದ್ದು, ಇಲ್ಲಿ ಜ್ಞಾನಮಂದಿರ ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದರು.
ಮಳೆ ಕೊರತೆ ಮತ್ತು ಹಳದಿ ರೋಗದಿಂದ ಭತ್ತ ಬೇಸಾಯ ಹಾನಿಗೀಡಾಗಿದ್ದು, ರೈತರಿಗೆ ಸೂಕ್ತ ಪರಿಹಾರಧನ ನೀಡುವುದರ ಜೊತೆಗೆ ರೈತರ ಸಾಲ ಮನ್ನಾ ಮಾಡಬೇಕು. ಈ ಬಗ್ಗೆ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಮತ್ತು ಕಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕರುಣೇಂದ್ರ ಪೂಜಾರಿ, ಸತೀಶ ಪೂಜಾರಿ ಕಜೆಕಾರು, ತಾರನಾಥ ಕಜೆಕಾರು, ಯಶವಂತ ಕಜೆಕಾರು ಇದ್ದರು.
