ಮುಂಡ್ಕೂರಿನ ಪಾಲಿಗೆ ಕರ್ಣನಂತಿದ್ದ ನಟನ ನೆನಪು ಅಮರ

0
21

ಮುಂಡ್ಕೂರಿನಲ್ಲಿ ನಾನಾ ಪಾಟೇಕರ್ ನೆನಪು ಅಮರ; ಧಾರ್ಮಿಕ ಕಾರ್ಯಗಳಿಗೆ ನೀಡಿದ್ದರು ನೆರವು

ಉಡುಪಿ: ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲಿಯೂ ಅವರ ಅಭಿಮಾನಿಗಳು ಹಾಗೂ ಆತ್ಮೀಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳ ಹಿಂದೆ ಮುಂಡ್ಕೂರಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ನಾನಾ ಪಾಟೇಕರ್ ಅವರು ಇಲ್ಲಿನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ನೆರವು ನೀಡಿದ್ದರು.

ಸುಮಾರು 25 ವರ್ಷಗಳ ಹಿಂದೆ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿಯೂ ನಾನಾ ಪಾಟೇಕರ್ ಅವರು ದೇಣಿಗೆ ನೀಡಿದ್ದರು. ಅವರ ನೆರವಿನಿಂದ ನಿರ್ಮಾಣಗೊಂಡಿರುವ ನಾನಾ ಪಾಟೇಕರ್ ಸಭಾಗೃಹ ಇಂದಿಗೂ ಅವರ ಸೇವೆಯ ನೆನಪನ್ನು ಉಳಿಸಿಕೊಂಡಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಈ ಸಭಾಗೃಹ ಮುಂಡ್ಕೂರಿನ ಪ್ರಮುಖ ಕಟ್ಟಡಗಳಲ್ಲೊಂದಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗುರುಪ್ರಸಾದ್ ಸುಧಾಕರ ಶೆಟ್ಟಿ ಅವರೊಂದಿಗೆ ಸ್ನೇಹ

ಮುಲ್ಲಡ್ಕದ ಗುರುಪ್ರಸಾದ್ ಸುಧಾಕರ ಶೆಟ್ಟಿ ಅವರೊಂದಿಗೆ ನಾನಾ ಪಾಟೇಕರ್ ಆತ್ಮೀಯ ಸ್ನೇಹ ಹೊಂದಿದ್ದರು. ಈ ಸ್ನೇಹದ ಹಿನ್ನೆಲೆಯಲ್ಲಿ ಅವರು ಮುಂಡ್ಕೂರಿಗೆ ಹಲವು ಬಾರಿ ಭೇಟಿ ನೀಡುತ್ತಿದ್ದರು. ಈ ಸಂದರ್ಭ ಸ್ಥಳೀಯ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳ ಬಗ್ಗೆ ಆಸಕ್ತಿ ವಹಿಸಿ ನೆರವು ನೀಡಿದ್ದರು.

ಮುಲ್ಲಡ್ಕದ ಬ್ರಹ್ಮ ಬೈದರ್ಕಳ ಗರಡಿ ಹಾಗೂ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗೂ ನಾನಾ ಪಾಟೇಕರ್ ಅವರು ಸಹಾಯಹಸ್ತ ಚಾಚಿದ್ದರು ಎಂದು ಸ್ಥಳೀಯರು ಸ್ಮರಿಸಿದ್ದಾರೆ.

ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ನಾನಾ ಪಾಟೇಕರ್ ಅವರು ಮುಂಡ್ಕೂರಿನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ನೀಡಿದ ಕೊಡುಗೆಯಿಂದ ಇಲ್ಲಿನ ಜನರ ಮನದಲ್ಲೂ ವಿಶೇಷ ಸ್ಥಾನ ಪಡೆದಿದ್ದಾರೆ. ಅವರ ಹೆಸರಿನ ಸಭಾಗೃಹ ಸೇರಿದಂತೆ ಅವರು ನೀಡಿದ ನೆರವು ಮುಂದಿನ ಪೀಳಿಗೆಗೂ ಅವರ ಸೇವೆಯನ್ನು ನೆನಪಿಸುವಂತಿದೆ.