13 ವರ್ಷಗಳ ಹುಡುಕಾಟಕ್ಕೆ ತೆರೆ: ನ್ಯಾಯಾಲಯಕ್ಕೆ ಗೈರಾಗಿದ್ದ ಆರೋಪಿ ಸೆರೆ

0
34

ಮಂಗಳೂರು : ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ 2013ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಳೆದ 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಯನ್ನು 41 ವರ್ಷದ ಹಸನ್ ಶಬೀರ್ ಎಂದು ಗುರುತಿಸಲಾಗಿದೆ. ಈತ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆ ಸಮೀಪದ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ದೀರ್ಘಕಾಲದಿಂದ ಎಲ್‌ಪಿಸಿ (LPC) ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕಳೆದ 13 ವರ್ಷಗಳಲ್ಲಿ ಸುಮಾರು 37 ಬಾರಿ ವಾರಂಟ್ ಹೊರಡಿಸಲಾಗಿತ್ತು ಎನ್ನಲಾಗಿದೆ.

ಆದರೆ, ಆರೋಪಿ ತನ್ನ ವಿಳಾಸವನ್ನು ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದ. ಇದೀಗ ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಯ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅಕ್ಟೋಬರ್ 17ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.