ತುಳು ಭಗವದ್ಗೀತೆ ಇನ್ನು ಜಗದಗಲ ತುಳುವರ ಮಡಿಲಿಗೆ

0
20

ನಿಮ್ಮ ನೆನಪನ್ನು ಸರಿಯಾಗಿ ಐದು ವರ್ಷದ ಹಿಂದಕ್ಕೆ ಕರೆದೊಯ್ದರೆ ನಿಮಗೆ ಈ ವಿಶೇಷ ಸಂದರ್ಭ ಅತ್ಯಾನಂದ ಕೊಡಬಹುದು.

ಐಲೇಸಾ “ತುಳುವ ಜಾಲ್ಡ್ ಕೃಷ್ಣ ಪಾರ್ದನ” ಎಂಬ ಅಮೋಘ ಧಾರ್ಮಿಕ ಕಾರ್ಯಕ್ರಮವನ್ನು 2021 ರಲ್ಲಿ ಸತತ ಏಳು ದಿನಗಳ ಕಾಲ ಝೂಮ್ ವೇದಿಕೆಯಲ್ಲಿ ಮಾಡಿದಾಗ ಅದಕ್ಕೆ ಸಿಕ್ಕ ಬೆಂಬಲ ಶಬ್ದಗಳಿಗೆ ನಿಲುಕದ್ದು. ಕೆಲವಾರು ಧಾರ್ಮಿಕ ಮುಖ್ಯಸ್ಥರ ಭಾಗವಹಿಸುವಿಕೆಯೊಂದಿಗೆ ಅಂದಿನ ಕರೋನಾ ದುರಿತ ಕಾಲದಲ್ಲಿ ಸಂಜೀವಿನಿಯಂತೆ ಒದಗಿ ಬಂದದ್ದು ಈ ಭಾಗವತ ಸಪ್ತಾಹ.

ಐಲೇಸಾ ಏರ್ಪಡಿಸಿದ್ದ ತುಳು ಭಾಷಿಗರ ಭಾಗವತ ಸಪ್ತಾಹದ ಅಭಿಮಾನಕ್ಕೆ ಮನಸೋತ ಇಸ್ಕಾನ್ ಸಂಸ್ಥೆ ಆವತ್ತು ತುಳುವಿನಲ್ಲಿ ಭಗವದ್ಗೀತೆಯನ್ನು ಪ್ರಪಂಚದಾದ್ಯಂತ ಪ್ರಕಟಿಸುವ ಭರವಸೆ ನೀಡಿತ್ತು. ಆ ಭರವಸೆ ಈಗ ಈಡೇರಿದೆ.

ಸುಮಾರು ಐದು ವರ್ಷಗಳ ದೀರ್ಘಕಾಲ ಕನ್ನಡದ ಭಗವದ್ಗೀತೆಯ ತುಳು ಅನುವಾದಕ್ಕೆ ಆಸಕ್ತಿ ಆಸ್ಥೆ ತೋರಿದ ಮತ್ತು ತಪಸ್ಸಿನಂತೆ ಆ ಕಾರ್ಯಮಾಡಿ ಮುಗಿಸಿದ ಮುಂಬೈಯ ಚಂದ್ರಾವತಿ ಮತ್ತು ಬೆಂಗಳೂರಿನ ಕೃಷ್ಣದಾಸ, ಅಮೇರಿಕಾದ ಶ್ರೀವಲ್ಲಿ ರೈ ಮತ್ತು ನಿಟ್ಟೆ ವಿಶ್ವವಿದ್ಯಾಲಯದ ಡಾ.ಸಾಯಿಗೀತಾ ಅವರು ಈ ಭವ್ಯ ಯಶಸ್ಸಿನ ಪಾಲುದಾರರು.

ಈ ದಿವ್ಯ ದೀಕ್ಷೆ ಹೊತ್ತುಕೊಂಡ ಇಸ್ಕಾನ್ ಸಂಸ್ಥೆಯ ಪ್ರಸಾದೇಶ್ವರ ಕೃಷ್ಣದಾಸರು ಅವರದ್ದಂತೂ ಬೆಂಬಿಡದ ಭಗೀರಥ ಪ್ರಯತ್ನ. ಇದೇ ತಿಂಗಳ ತಾರೀಖು 18-10-2026 ರಂದು ಈ ತುಳು ಭಗವದ್ಗೀತೆ ಶಾಸ್ತ್ರೀಯವಾಗಿ ಬಿಡುಗಡೆಯಾಗಲಿದೆ.

ನಂತರ ದೇಶ ವಿದೇಶಗಳಲ್ಲಿ ಪ್ರಸಾರ ಪ್ರಚಾರ ಸಮಿತಿಗಳನ್ನು ರಚಿಸಿಕೊಂಡು ಅಲ್ಲಿಯೂ ಬಿಡುಗಡೆಯಾಗಿ ವಿಶ್ವದ ಎಲ್ಲೆಡೆ ತುಳು ಭಗವದ್ಗೀತೆ ಕೈಗೆಟುಕುವ ರೀತಿಯಲ್ಲಿ ನಿಮ್ಮ‌ಮನೆ‌ ಮುಟ್ಟಲಿದೆ.

ಟೀಂ ಐಲೇಸಾ