ಮೊಬೈಲ್ ಫೋನ್ ವಿಚಾರವಾಗಿ ಗಲಾಟೆ : ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

0
12

ಮಂಗಳೂರು : ಮೊಬೈಲ್ ಫೋನ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹15,000 ದಂಡ ವಿಧಿಸಿ ತೀರ್ಪು ನೀಡಿದೆ. 2024ರಲ್ಲಿ ತೋಟ ಬೆಂಗ್ರೆಯಲ್ಲಿ ನಡೆದಿದ್ದ ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಅಕ್ಟೋಬರ್ 12ರಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ತೋಟ ಬೆಂಗ್ರೆ ನಿವಾಸಿ ಧರ್ಮರಾಜ್ ಸುವರ್ಣ (50) ಶಿಕ್ಷೆಗೊಳಗಾದ ಆರೋಪಿ. ಬಾಗಲಕೋಟೆ ಮೂಲದ ಮುತ್ತು ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ (39) ಕೊಲೆಯಾದ ವ್ಯಕ್ತಿ.

ಮೊಬೈಲ್ ವಿಚಾರವಾಗಿ ನಡೆದಿತ್ತು ಗಲಾಟೆ

ಧರ್ಮರಾಜ್ ಸುವರ್ಣ ಮತ್ತು ಮುತ್ತು ಬಸವರಾಜ ವಡ್ಡರ್ ಕೆಲವು ಸಮಯದಿಂದ ಪರಿಚಯಸ್ಥರಾಗಿದ್ದರು. ಧರ್ಮರಾಜ್ ಹೊಸ ಮೊಬೈಲ್ ಖರೀದಿಸಿದ್ದು, ಅದನ್ನು ಮುತ್ತು ಬಸವರಾಜ ತೆಗೆದುಕೊಂಡು ಹಿಂದಿರುಗಿಸದೆ, ಮೊಬೈಲ್ ಹಾಳು ಮಾಡಿದ್ದ ವಿಚಾರವಾಗಿ ಇಬ್ಬರ ನಡುವೆ 2024ರ ಸೆಪ್ಟೆಂಬರ್ 21ರಂದು ಗಲಾಟೆ ನಡೆದಿತ್ತು ಎನ್ನಲಾಗಿದೆ.

ಈ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಧರ್ಮರಾಜ್ ಸುವರ್ಣ ಮರದ ಸೋಂಟೆಯಿಂದ ಮುತ್ತು ಬಸವರಾಜ ಅವರಿಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು.

ಕೇರಳದಲ್ಲಿ ಆರೋಪಿಯ ಬಂಧನ

ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಣಂಬೂರು ಪೊಲೀಸರು 2024ರ ಸೆಪ್ಟೆಂಬರ್ 26ರಂದು ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಚೊಂಪಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿದ್ದರು.

ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮೊಹಮ್ಮದ್ ಸಲೀಂ ಅಬ್ಬಾಸ್ ಅವರು ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದರು. ಬಳಿಕ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ (ಎಸ್‌ಸಿ–ಎಸ್‌ಟಿ ಕಾಯ್ದೆ) ಕಲಂಗಳು ಸೇರ್ಪಡೆಯಾದ ಹಿನ್ನೆಲೆಯಲ್ಲಿ, ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ ಕೆ. ಅವರು ಮುಂದಿನ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಜೀವಾವಧಿ ಶಿಕ್ಷೆ, ₹15 ಸಾವಿರ ದಂಡ

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರು ಅಕ್ಟೋಬರ್ 12ರಂದು ತೀರ್ಪು ಪ್ರಕಟಿಸಿದರು. ಆರೋಪಿ ಧರ್ಮರಾಜ್ ಸುವರ್ಣಗೆ ಜೀವಾವಧಿ ಶಿಕ್ಷೆ ಹಾಗೂ ₹15,000 ದಂಡ ವಿಧಿಸಿದರು.

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ್ ಅವರು ವಾದ ಮಂಡಿಸಿದ್ದರು.